ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅತ್ಯಾಚಾರಿ ಮಗನನ್ನು ಪೊಲೀಸರಿಗೊಪ್ಪಿಸಿದ ದಿಟ್ಟೆ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅತ್ಯಾಚಾರಿ ಮಗನನ್ನು ಪೊಲೀಸರಿಗೊಪ್ಪಿಸಿದ ದಿಟ್ಟೆ! Search similar articles
ಎಲ್ಲಾ ಮನುಷ್ಯರೂ ಒಂದೇ ರೀತಿಯ ಗುಣ, ಒಂದೇ ರೀತಿಯ ನಡತೆ, ಒಂದೇ ರೀತಿಯ ಭಾವನೆಗಳನ್ನು ಹೊಂದಿರಬೇಕೆನ್ನುವ ಕಾನೂನು ಎಲ್ಲಿಯೂ ಇಲ್ಲ. ಅತ್ಯಾಚಾರ ಮಾಡಿ ಶಿಕ್ಷೆ ಅನುಭವಿಸುತ್ತಿದ್ದ ಪುತ್ರನಿಗೆ ಬಂಧನದಿಂದ ಪಾರಾಗಲು ಸಹಕರಿಸಿದ ತಂದೆ, ಮಾಜಿ ಡಿಜಿಪಿ ಬಿ.ಬಿ.ಮೊಹಾಂತಿ ಇರುವ ನಾಡಿನಿಂದಲೇ ಮತ್ತೊಂದು ವ್ಯತಿರಿಕ್ತ ಪ್ರಕರಣ ಕೇಳಿಬಂದಿದೆ. ಪುತ್ರ ವ್ಯಾಮೋಹದಿಂದ ಕಾನೂನಿನ ಕಣ್ಣೆರಚಲು ನೋಡಿದ ಈ ತಂದೆಗೆ ವಿರುದ್ಧವಾಗಿ, ಅತ್ಯಾಚಾರ ನಡೆಸಿದ ಮಗನನ್ನೇ ತಾಯಿಯೊಬ್ಬಳು ನ್ಯಾಯದ ಕಟಕಟೆಯೆದುರು ನಿಲ್ಲಿಸಲು ನೆರವಾದ ಘಟನೆ ಇದೇ ಒರಿಸ್ಸಾದಲ್ಲಿ ನಡೆದಿದೆ.

ಈ ಮೂಲಕ, ಅತ್ಯಾಚಾರಿ ಪುತ್ರನಿಗೆ ಶಿಕ್ಷೆ ಕೊಡಿಸುವಲ್ಲಿ ಮಾತೃ ಪ್ರೇಮಕ್ಕಿಂತಲೂ ನ್ಯಾಯವೇ ಮಿಗಿಲು ಎಂದು ಸಾರಿದ್ದಾಳೆ. ಒರಿಸ್ಸಾದ ಬಾಲಸೋರ್ ಜಿಲ್ಲೆಯ ಛಾಯಾಮಣಿ ಮೊಹಂತಿ ಸಾಮಾನ್ಯ ತಾಯಿಯೊಬ್ಬಳು ಯೋಚಿಸಲಾರದಂತಹ ಕೆಲಸವನ್ನು ಮಾಡಿ ತೋರಿದ್ದಾಳೆ. ವಿವಾಹಿತ ಮಹಿಳೆಯನ್ನು ಅತ್ಯಾಚಾರ ಮಾಡಿದ ತನ್ನ ಮಗನನ್ನು ಬಂಧಿಸುವಲ್ಲಿ ಪೋಲೀಸರಿಗೆ ಈಕೆ ನೆರವಾಗಿದ್ದಾಳೆ.

ಭೋಗ್ರೈಯಲ್ಲಿರುವ ಅಭಯಮಣಿ ಗ್ರಾಮದ 50 ವರ್ಷದ ಛಾಯಾಮಣಿಯ 22 ರ ಹರೆಯದ ಪುತ್ರ ನಿತಾಯಾ, ಅದೇ ಗ್ರಾಮದ 35 ರ ಹರೆಯದ ವಿವಾಹಿತ ಮಹಿಳೆಯ ಮೇಲೆ ಜುಲೈ 24ರಂದು ಅತ್ಯಾಚಾರ ಎಸಗಿದ್ದ.

ಪೋಲೀಸ್ ಮೂಲಗಳ ಪ್ರಕಾರ, ನಿತಾಯಾ ಪಕ್ಕದೂರಿನಿಂದ ಆ ಮಹಿಳೆ ಹಿಂತಿರುಗುವ ವೇಳೆಯಲ್ಲಿ ಅವಳನ್ನು ಮರಕ್ಕೆ ಕಟ್ಟಿ ಆಕೆಯ ಮೇಲೆ ಆಕ್ರಮಣ ಮಾಡಿ ಅತ್ಯಾಚಾರವೆಸಗಿ ತಕ್ಷಣ ಆ ಊರಿನಿಂದ ಪರಾರಿಯಾಗಿ, ಸುಮಾರು 50 ಕಿ.ಮೀ. ದೂರವಿರುವ ಪ. ಬಂಗಾಳದ ಕೇವದನಲ್‌ನಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ತಲೆಮರೆಸಿಕೊಂಡಿದ್ದ.

ಆತನನ್ನು ಪತ್ತೆ ಹಚ್ಚಲು ಅಸಾಧ್ಯವಾದಾಗ ಪೋಲೀಸ್ ಇಲಾಖೆಯು ನಿತಾಯಾನ ತಾಯಿ ಛಾಯಾಮಣಿಯ ಸಹಾಯ ಯಾಚಿಸಿತು. ಆಕೆಯ ಮನೆಗೆ ಹೋಗಿ ನಿತಯಾನ ಹೀನ ಕೃತ್ಯದ ಬಗ್ಗೆ ವಿವರಿಸಿ ಆತನ ಬಂಧನಕ್ಕಾಗಿ ಆಕೆಯಲ್ಲಿ ಸಹಾಯ ಕೋರಿದರು. ವಿಷಯ ತಿಳಿದ ಛಾಯಾಮಣಿಯು ಪೊಲೀಸರಿಗೆ ಬೆಂಬಲ ನೀಡುವುದಾಗಿ ಒಪ್ಪಿಗೆ ನೀಡಿ, ಆತ ಎಲ್ಲಿ ಅಡಗಿದ್ದಾನೆ ಮತ್ತು ಆತನನ್ನು ಹೇಗೆ ಹಿಡಿಯಬಹುದು ಎಂದೂ ತಿಳಿಸಿರುವುದಾಗಿ ಭೋಗ್ರೈ ಪೊಲೀಸ್ ಠಾಣಾಧಿಕಾರಿ ಪರಶುರಾಮ್ ಸಾಹು ಹೇಳಿದ್ದಾರೆ.

ಇದಲ್ಲದೆ, ಛಾಯಾಮಣಿಯ ಮುಂದಾಳತ್ವದಲ್ಲಿ ಬಂದಂತಹ ಪೊಲೀಸರ ದಂಡನ್ನು ಕಂಡು ನಿತಯಾನಿಗೆ ತನ್ನ ಕಣ್ಣುಗಳನ್ನು ತನಗೇ ನಂಬಲು ಅಸಾಧ್ಯವಾಯಿತು. ಜುಲೈ 29ರ ರಾತ್ರಿ ನಿತಾಯಾ ಬಂಧನಕ್ಕೆ ಒಳಪಟ್ಟು ಜೈಲು ಸೇರಿದ್ದಾನೆ.

ಛಾಯಾಮಣಿಯ ಪತಿ ವಿಧಿವಶನಾಗಿ 15 ವರ್ಷಗಳೇ ಸಂದು ಹೋಗಿದ್ದವು. ಆಕೆಯ ಹಿರಿಯ ಮಗ ಕಳೆದ 6 ವರ್ಷಗಳಿಂದ ನಾಪತ್ತೆಯಾಗಿದ್ದ. ಇಂತಹ ಶೋಚನೀಯ ಸಂದರ್ಭದಲ್ಲೂ ತನ್ನ ಪಾಲಿಗೆ ಉಳಿದಿದ್ದ ಏಕೈಕ ಪುತ್ರನ ರಕ್ಷಣೆಯ ಬಗ್ಗೆ ಚಿಂತಿಸದ ಆಕೆ, ಸಮಾಜದ ಹಾಗೂ ಕಾನೂನಿನ ರಕ್ಷಣೆಗೆ ಮನ ಮಾಡಿದ್ದು, ಉಳಿದವರಿಗೆ ಮಾದರಿಯಾಗಿದ್ದಾಳೆ.

ಪೊಲೀಸರು ನಿತಯಾನನ್ನು ಬಂಧಿಸಿದಾಗ ಆಕೆ ಪರಿಸ್ಥಿತಿ ನೆನಪಿಸಿಕೊಂಡು ಪುತ್ರ ವ್ಯಾಮೋಹದಿಂದ ಕಣ್ಣೀರು ಸುರಿಸಿದಳು. ಆದರೂ, ಇನ್ನೊಂದೆಡೆ ನ್ಯಾಯಕ್ಕೆ ಸಹಕರಿಸಿದ ಹೆಮ್ಮೆ ಆಕೆಯ ಕಣ್ಣುಗಳಲ್ಲಿ ಗೋಚರವಾಗುತ್ತಿತ್ತು.

ನ್ಯಾಯದ ಮುಂದೆ ಕಣ್ಣು ಮುಚ್ಚಿಕೊಂಡು ಕೂರಲಾರೆ, ತಪ್ಪು ಯಾರೇ ಮಾಡಿದರೂ ಅವರಿಗೆ ಶಿಕ್ಷೆಯಾಗಲೇಬೇಕು ಎಂದಿರುವ ಆಕೆ, ಇದು ಕಠಿಣವಾದ ನಿರ್ಧಾರ ಹೌದು ಎಂಬುದನ್ನು ಒಪ್ಪಿಕೊಂಡಿದ್ದಾಳೆ.
ಮತ್ತಷ್ಟು
ಅಣು ಒಪ್ಪಂದ: ಎನ್‌ಎಸ್‌ಜಿ ಒಪ್ಪಿಗೆ ಸುಲಭವಲ್ಲ
ಐತಿಹಾಸಿಕ 'ಅಣು' ದಿನ: ಮನಮೋಹನ್ ಸಿಂಗ್
ಕಾವೇರಿದ ಪ್ರತಿಭಟನೆ: ಜಮ್ಮುವಿನಲ್ಲಿ ಸೇನೆಗೆ ಬುಲಾವ್
'ಅಣು' ಆತಂಕ ನಿಜವಾಗಿದೆ: ಎಡಪಕ್ಷಗಳ ಪ್ರತಿಕ್ರಿಯೆ
ಕಾಂಗ್ರೆಸ್ ಸಂಸ್ಕೃತಿ ಕೆಟ್ಟುಹೋಗಿದೆ: ಡಿ.ರಾಜಾ
ಭಾರತದಲ್ಲಿ ಸೂರ್ಯಗ್ರಹಣ ಗೋಚರ: ಚಿತ್ರ ಇಲ್ಲಿದೆ