ಬೆಂಗಳೂರು ಮತ್ತು ಅಹಮದಾಬಾದ್ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಭಯೋತ್ಪಾದನೆ ಮತ್ತು ಉಗ್ರಗಾಮಿ ಚಟುವಟಿಕೆಗಳ ಹಾಗೂ ಧರ್ಮದ ನಡುವೆ ಸಂಬಂಧ ಕಲ್ಪಿಸುವುದರ ವಿರುದ್ಧ ಜಾಮಾ ಮಸೀದಿಯಲ್ಲಿ ಮುಸ್ಲಿಮರು ಶುಕ್ರವಾರ ತೀವ್ರ ಪ್ರತಿಭಟನೆ ನಡೆಸಿದರು.
ಭಯೋತ್ಪಾದನೆಯ ವಿರುದ್ಧದ ತಮ್ಮ ಹೋರಾಟದ ಸಂಕೇತವಾಗಿ ಪ್ರತಿಕೃತಿಯೊಂದಕ್ಕೆ ಪಟಾಕಿಯ ಮಾಲೆಯನ್ನು ಹಾಕಿ ಅದಕ್ಕೆ ಬೆಂಕಿ ಹಚ್ಚಿ ಘೋಷಣೆಗಳನ್ನು ಕೂಗಿದರು. ಶಂಕಿತ ಉಗ್ರರೆಂದು ಕೇವಲ ಮುಸ್ಲಿಮರನ್ನೇ ಬಿಂಬಿಸುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಈ ಪ್ರತಿಭಟನಾಕಾರರು, ಭಯೋತ್ಪಾದನೆಯಲ್ಲಿ ಯಾವುದೇ ಪ್ರತ್ಯೇಕ ಧರ್ಮವು ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಯೋತ್ಪಾದನೆ ಕೃತ್ಯ ಎಸಗುತ್ತಿರುವವರು ಆಡಳಿತಾರೂಢ ಪಕ್ಷದ ಭಾಗದವರಾಗಿದ್ದಾರೆ. ಕೇವಲ ಮುಸ್ಲಿಂ ಮತ್ತು 'ಇಂಡಿಯನ್ ಮುಜಾಹಿದ್ದೀನ್' ಅವರನ್ನು ಮಾತ್ರ ಗುರಿಯಾಗಿಸಬಾರದು ಎಂದು ಪ್ರತಿಭಟನಾಕಾರ ಜಮೀಮಿ ಅಂಜುಮ್ ದಲ್ವಿ ತಿಳಿಸಿದ್ದಾರೆ.
ದಿನಗಳ ಅಂತರದಲ್ಲಿ ನಡೆದ ಬೆಂಗಳೂರು ಮತ್ತು ಅಹಮದಾಬಾದ್ ಬಾಂಬ್ ಸ್ಫೋಟವು ದೇಶದ ಜನತೆಯನ್ನು ತಲ್ಲಣಗೊಳಿಸಿತ್ತು. ಈ ಸ್ಫೋಟದಲ್ಲಿ ಸುಮಾರು 45 ಮಂದಿ ಸಾವನ್ನಪ್ಪಿದ್ದರು. ಅಹಮದಾಬಾದ್ ಸರಣಿ ಸ್ಫೋಟಗಳ ಹೊಣೆ ಹೊತ್ತುಕೊಂಡಿದ್ದ 'ಇಂಡಿಯನ್ ಮುಜಾಹಿದೀನ್' ಎಂಬ ಉಗ್ರಗಾಮಿ ಸಂಘಟನೆಯು, ಇದು 2002ರ ಗುಜರಾತ್ ಗಲಭೆಗಳಲ್ಲಿ ಮುಸ್ಲಿಮರ ಸಾವಿಗೆ ಪ್ರತೀಕಾರ ಎಂಬ ಇ-ಮೇಲ್ ಸಂದೇಶ ಕಳುಹಿಸಿತ್ತು.
|