ಸೇತುಸಮುದ್ರಂ ಯೋಜನೆಗೆ ಸಂಬಂಧಿಸಿದಂತೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಗಣನೆಗೆ ತೆಗೆದುಕೊಳ್ಳದೆ ಡಿಎಂಕೆ ಪಕ್ಷವು ತಮಿಳುನಾಡಿನಲ್ಲಿ ಬಂದ್ ನಡೆಸಿದ್ದು, ಇದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ಸುಪ್ರೀಂ ಕೋರ್ಟ್ ತಪರಾಕಿ ನೀಡಿರುವ ಬೆನ್ನಲ್ಲೇ, ಆರೋಪಿತ 'ಕರ್ತವ್ಯಲೋಪ'ಕ್ಕಾಗಿ ರಾಜ್ಯ ಸರಕಾರದ ಇಬ್ಬರು ವಕೀಲರನ್ನು ಕಾರ್ಯತ್ಯಜಿಸಲು ಕರುಣಾನಿಧಿ ಸೂಚನೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ನೋಟೀಸ್ ನೀಡಿರುವ ಬಗ್ಗೆ ವಕೀಲರು ತನಗೆ ಯಾವುದೇ ಸೂಚನೆಯನ್ನು ನೀಡಿರಲಿಲ್ಲ. ಒಂದು ವೇಳೆ ಇದನ್ನು ಮೊದಲೇ ತಿಳಿಸಿದ್ದಲ್ಲಿ, ತನ್ನ ಮೇಲೆ ಹಾಗೂ ಕೇಂದ್ರ ಸಚಿವ ಟಿ.ಆರ್.ಬಾಲು ಅವರ ವಿರುದ್ಧ ಸುಪ್ರೀಂ ಕೋರ್ಟ್ ಹರಿಹಾಯುವ ಪ್ರಸಂಗ ಮತ್ತು ಬಂಧನ ವಾರಂಟ್ ಹೊರಡಿಸುವ ಎಚ್ಚರಿಕೆ ನೀಡುವ ಸಂದರ್ಭ ಬರುತ್ತಿರಲಿಲ್ಲ ಎಂದು ಕರುಣಾನಿಧಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತನ್ನ ಸರಕಾರವು ಎಂದಿಗೂ ನ್ಯಾಯಾಂಗವನ್ನು ಗೌರವಿಸುವುದಾಗಿ ಕರುಣಾನಿಧಿ ತಿಳಿಸಿದ್ದು, ಕರ್ತವ್ಯಲೋಪ ಮಾಡಿರುವ ಹಿನ್ನೆಲೆಯಲ್ಲಿ ಹುದ್ದೆಗೆ ರಾಜೀನಾಮೆ ನೀಡುವಂತೆ ವಕೀಲರಿಗೆ ಆದೇಶ ನೀಡಿದ್ದಾರೆ.
ಸೇತುಸಮುದ್ರಂ ಬಂದ್ ವಿವಾದಕ್ಕೆ ಸಂಬಂಧಿಸಿ ಜಾರಿಗೊಳಿಸಲಾದ ನ್ಯಾಯಾಲಯ ನಿಂದನೆಯ ನೋಟೀಸ್‌ಗೆ ಈ ತನಕ ಸ್ಪಂದಿಸದಿರುವ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ, ಕೇಂದ್ರ ಸಾರಿಗೆ ಸಚಿವ ಟಿ.ಆರ್.ಬಾಲು ಸೇರಿದಂತೆ ನಾಲ್ಕು ಮಂದಿಗೆ ಸುಪ್ರೀಂ ಕೋರ್ಟ್ ಸೋಮವಾರ ನೋಟೀಸ್ ನೀಡಿದೆ.
ಮುಷ್ಕರ ನಡೆಸಬಾರದು ಎಂಬ ನ್ಯಾಯಾಲಯದ ಆದೇಶವಿದ್ದರೂ, ಕಳೆದ ಅಕ್ಟೋಬರ್ ಒಂದರಂದು ಮುಷ್ಕರ ನಡೆಸಿದ ಕ್ರಮಕ್ಕಾಗಿ ನ್ಯಾಯಾಲಯ ನಿಂದನೆ ಆರೋಪ ಹೊರಿಸಿ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು ಸೋಮವಾರ ಕರುಣಾನಿಧಿ, ಬಾಲು ಹಾಗೂ ಇತರ ನಾಲ್ವರಿಗೆ ನೋಟೀಸ್ ಹೊರಡಿಸಿದೆ.
|