ಜನವಿರೋಧಿ ಭಾರತ ಅಮೆರಿಕ ಪರಮಾಣು ಒಪ್ಪಂದದಲ್ಲಿ ಮುಂದುವರಿದಿರುವ ಕಾಂಗ್ರೆಸ್ ವಿರುದ್ಧ ಮತ್ತು ಕೋಮುವಾದಕ್ಕೆ ಪ್ರಚೋದನೆ ನೀಡುವ ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಹೋರಾಡಲು ತೃತೀಯ ರಂಗವು ಸದ್ಯದಲ್ಲಿಯೇ ರೂಪುಗೊಳ್ಳಲಿದೆ ಎಂದು ಸಿಪಿಐ(ಎಂ) ತಿಳಿಸಿದೆ.
ಅಗರ್ತಲದಲ್ಲಿ ಸಿಪಿಐ(ಎಂ)ನ 19ನೇ ರಾಜ್ಯ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ಕಾಂಗ್ರೆಸ್‌ನ ಜನವಿರೋಧಿ ಚಟುವಟಿಕೆ ಹಾಗೂ ಬಿಜೆಪಿ ನೇತೃತ್ವದ ಎನ್‌ಡಿಎಯ ಕೋಮುವಾದಿ ಪ್ರಚೋದನೆಯ ವಿರುದ್ಧ, ಬಿಎಸ್‌ಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರನ್ನೊಳಗೊಂಡ ಕೇಂದ್ರ ರ‌್ಯಾಲಿಯನ್ನು ದೆಹಲಿಯಲ್ಲಿ ಆಗಸ್ಟ್ ಅಂತ್ಯದೊಳಗೆ ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ಅಣು ಒಪ್ಪಂದದಲ್ಲಿ ಮುಂದುವರಿದು ಜನವಿರೋಧಿ ಪಕ್ಷವೆಂಬ ಹಣೆಪಟ್ಟಿ ಪಡೆದಿದ್ದು, ರಾಜಕೀಯ ಲಾಭಕ್ಕಾಗಿ ಕೋಮುವಾದಿ ಚಟುವಟಿಕೆಗೆ ಬಿಜೆಪಿಯು ಪ್ರಚೋದನೆ ನೀಡುತ್ತಿದೆ, ಈ ಹಿನ್ನೆಲೆಯಲ್ಲಿ ದೇಶಕ್ಕೆ ಮೂರನೇ ರಂಗದ ಅಗತ್ಯವಿದೆ ಎಂದು ಕಾರಟ್ ಇದೇ ವೇಳೆ ಅಭಿಪ್ರಾಯಪಟ್ಟರು.
ಪ್ರಗತಿಪರ ಆರ್ಥಿಕ ನೀತಿ, ಕೋಮುವಾದ, ಭಾರತ ಅಮೆರಿಕ ಪರಮಾಣು ಒಪ್ಪಂದ ಮತ್ತು ದೇಶದ ಸ್ವತಂತ್ರ ವಿದೇಶಿ ನೀತಿ ರಕ್ಷಣೆಯ ಕುರಿತಂತೆ ಮೂರನೇ ರಂಗವು ದೇಶಾದ್ಯಂತ ಆಂದೋಲನವನ್ನು ಆಯೋಜಿಸಲಿದೆ ಎಂದು ಅವರು ತಿಳಿಸಿದರು.
ಈ ನಡುವೆ, ವಿಶ್ವಾಸಮತ ಗೊತ್ತುವಳಿಯ ವೇಳೆಗಿನ ಕುದುರೆ ವ್ಯಾಪಾರವು ಡಾ.ಮನಮೋಹನ್ ಸಿಂಗ್ ಅವರು ತಲೆತಗ್ಗಿಸುವಂತಹ ವಿಷಯವಾಗಿದ್ದು, ಜುಲೈ 22ರಂದು ಮನಮೋಹನ್ ಸಿಂಗ್ ಅವರ ವಿಶ್ವಾಸಮತದ ಗೆಲುವು ನ್ಯಾಯಯುಕ್ತವಾದದ್ದಲ್ಲ ಎಂದು ಹೇಳಿದರು.
ಅದಾಗ್ಯೂ, ಕಾಂಗ್ರೆಸ್ ಮತ್ತು ಬಿಜೆಪಿಯ ದುರಾಡಳಿತದಿಂದ ಬೇಸತ್ತ ದೇಶದ ಜನತೆಗೆ ತೃತೀಯ ರಂಗವು ಪರ್ಯಾಯ ಮಾರ್ಗವಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.
|