ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಗರ್ಭಪಾತದ ಸಂದಿಗ್ಧತೆಯಲ್ಲಿ ಮೆಹ್ತಾ ದಂಪತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗರ್ಭಪಾತದ ಸಂದಿಗ್ಧತೆಯಲ್ಲಿ ಮೆಹ್ತಾ ದಂಪತಿ Search similar articles
ಮುಂಬೈ: ಹುಟ್ಟುವ ಮಗುವಿನ ವಿಕಲತೆಯ ಊಹೆಯು ಗರ್ಭಪಾತಕ್ಕೆ ಅನುಮತಿ ನೀಡಲು ಆಧಾರವಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಸೋಮವಾರ ಹೇಳಿದೆ. ಗರ್ಭಪಾತಕ್ಕೆ ಅನುಮತಿ ಕೋರಿ ಸಲ್ಲಿಸಲಾಗಿರುವ ಮನವಿಯನ್ನು ವಜಾ ಮಾಡುವ ವೇಳೆಗೆ ನ್ಯಾಯಾಲಯದ ಈ ತೀರ್ಪು ಹೊರಬಿದ್ದಿದೆ.

ವೈದ್ಯಕೀಯ ತಪಾಸಣೆ ವೇಳೆಗೆ ಉದರದಲ್ಲಿರುವ ಮಗುವಿನ ಜನನದ ಬಳಿಕ ಅದು ಆಜನ್ಮ ಪರಿಯಂತ ಹೃದ್ರೋಗದಿಂದ ಬಳಲುತ್ತದೆ ಎಂಬ ವಿಚಾರ ತಿಳಿದ ನಿಕಿತಾ ಹಾಗೂ ಹರೀಶ್ ಮೆಹ್ತಾ ದಂಪತಿಗಳು 24 ವಾರಗಳ ಭ್ರೂಣದ ಗರ್ಭಪಾತ ಮಾಡಿಸಲು ಮುಂದಾಗಿದ್ದರು. ಆದರೆ 24 ವಾರಗಳ ಭ್ರೂಣದ ಹತ್ಯೆಗೆ ಕಾನೂನಿನಲ್ಲಿ ಅವಕಾಶವಿಲ್ಲ. ಚಾಲ್ತಿಯಲ್ಲಿರುವ ಗರ್ಭಪಾತ ಕಾಯ್ದೆಯ ಪ್ರಕಾರ ಹುಟ್ಟಲಿರುವ ಮಗುವಿಗೆ ಯಾವುದೇ ತೆರನಾದ ಖಾಯಿಲೆ ಇದ್ದರೂ ಗರ್ಭಧಾರಣೆಯ 20 ವಾರಗಳ ಬಳಿಕ ಗರ್ಭಪಾತಕ್ಕೆ ಅವಕಾಶವಿಲ್ಲ.

ಜನಿಸಲಿರುವ ತಮ್ಮ ಮಗು ಮುಂದೆ ಜೀವನ ಪರ್ಯಂತ ಕಷ್ಟ ಅನುಭವಿಸಬೇಕಾಗುತ್ತದೆ ಎಂಬ ಕರಾಳ ವಾಸ್ತವವನ್ನು ಅರಿತುಕೊಂಡ ಮೆಹ್ತಾ ದಂಪತಿ, ನ್ಯಾಯಾಲಯದ ಮೊರೆ ಹೋಗಿದ್ದು, ಅಂಗವಿಕಲವಾಗಿ ಹುಟ್ಟುವ ಸಾಧ್ಯತೆ ಇರುವ ಭ್ರೂಣದ ಗರ್ಭಪಾತಕ್ಕೆ ಅವಕಾಶ ನೀಡಿ ಎಂದು ಕೋರಿದ್ದಲ್ಲದೆ, ಮಗುವಿಗೆ ಅಪಾಯವಿದೆ ಎಂದಾದರೆ, 20 ವಾರದ ನಂತರವೂ ಗರ್ಭಪಾತ ಮಾಡಿಸಲು ಅನುಕೂಲವಾಗುವಂತೆ ಕಾನೂನಿಗೆ ತಿದ್ದುಪಡಿ ತರವಂತೆ ಕೋರಿದ್ದರು.

ಮಗುವಿನ ತೊಂದರೆ ಎಷ್ಟು ಗಂಭೀರವಾದುದು ಎಂಬುದನ್ನು ಪತ್ತೆ ಮಾಡಲು ಮೂವರು ತಜ್ಞ ವೈದ್ಯರ ಸಮಿತಿಯನ್ನು ನ್ಯಾಯಾಲಯ ನೇಮಿಸಿತ್ತು. ಈ ಸಮಿತಿಯು ಆರಂಭಿಕ ವಿಚಾರಣೆ ವೇಳೆ ಮಗು ದುರ್ಬಲವಾಗಿ ಜನಿಸುವ ಸಾಧ್ಯತೆಗಳಿವೆ ಎಂದಿತ್ತು. ಆದರೆ, ನಂತರದ ವಿಚಾರಣೆ ವೇಳೆ ಇಂತಹ ಸಾಧ್ಯತೆಗಳು ಕಡಿಮೆ ಎಂದು ಹೇಳಿತ್ತು.

ವೈದ್ಯರ ಅಭಿಪ್ರಾಯದ ಪ್ರಕಾರ ಗರ್ಭಪಾತ ಅಗತ್ಯವಿದೆ ಎಂದೇನೂ ಇಲ್ಲದ ಕಾರಣ 20 ವಾರಗಳಿಗಿಂತ ಮೊದಲೇ ಕೋರ್ಟಿಗೆ ಬಂದಿದ್ದರೂ ಈ ಪ್ರಕರಣದಲ್ಲಿ ಗರ್ಭಪಾತಕ್ಕೆ ಅನುಮತಿ ನೀಡಲು ಸಾಧ್ಯವಿರಲಿಲ್ಲ ಎಂದು ಹೇಳಿರುವ ನ್ಯಾಯಾಲಯ, ಕಾಯ್ದೆಗೆ ತಿದ್ದುಪಡಿ ತರಬೇಕಿರುವುದು ಶಾಸನಸಭೆಯ ಕರ್ತವ್ಯ, ಈ ಕುರಿತು ನ್ಯಾಯಾಲಯವೇನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಏತನ್ಮಧ್ಯೆ, ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಅವರು ಗರ್ಭಪಾತ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಜಾರಿಯಲ್ಲಿರುವ ಗರ್ಭಪಾತ ಕಾಯ್ದೆಯ ಪ್ರಕಾರ -
ಪತಿಪತ್ನಿಯರ ಒಪ್ಪಿಗೆ ಇದ್ದಲ್ಲಿ, ನೋಂದಾಯಿತ ವೈದ್ಯರಿಂದ 20 ವಾರಗಳೊಳಗೆ ಗರ್ಭಪಾತ ಮಾಡಿಸಬಹುದಾಗಿದೆ. ಇದಲ್ಲದೆ, ತಾಯಿಯ ಜೀವಕ್ಕೆ ಅಪಾಯವಿದೆ ಎಂದಾದರೆ, ಆ ಬಳಿಕವೂ ಗರ್ಭಪಾತ ಮಾಡಿಸಬಹುದು. ಆದರೆ, ಜನಿಸುವ ಮಗುವಿಗೆ ತೊಂದರೆಯಾಗುತ್ತದೆ ಎಂದಾದರೆ, 20 ವಾರದ ನಂತರವೂ ಗರ್ಭಪಾತಕ್ಕೆ ಅವಕಾಶವಿಲ್ಲ.
ಮತ್ತಷ್ಟು
ಕೋಲ್ಕತಾ ಗ್ರಂಥಾಲಯದಿಂದ ಅಪರೂಪದ ಪುಸ್ತಕಗಳು ಕಾಣೆ
ಕೇರಳ: ಭಾನುವಾರ ಪೆಟ್ರೋಲ್ ಪಂಪ್‌ಗೆ ರಜೆ?
ಅಮರನಾಥ: ಸರ್ವಪಕ್ಷ ಸಭೆಗೆ ಪ್ರಧಾನಿ ಕರೆ
ವಕೀಲರ ರಾಜೀನಾಮೆಗೆ ಕರುಣಾನಿಧಿ ಒತ್ತಾಯ
ಅಮರ್‌ನಾಥ್ ಗಲಭೆಗೆ 3 ಬಲಿ
ಸು.ಕೋಗೆ ಬೆದರಿಕೆ: ಹೆಚ್ಚಿದ ಭದ್ರತೆ