ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಗೀತೆ, ಉಪನಿಷತ್ ಉಲ್ಲೇಖವಿರುವ ಹೊಸ ಬೈಬಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೀತೆ, ಉಪನಿಷತ್ ಉಲ್ಲೇಖವಿರುವ ಹೊಸ ಬೈಬಲ್ Search similar articles
ಉಪನಿಷತ್ತು, ಮನುಸ್ಮೃತಿ, ಭಗವದ್ಗೀತೆಗೂ ಬೈಬಲ್‌ಗೂ ಎಲ್ಲಿಯ ಸಂಬಂಧ? ಹೌದು. ಪೇಟಧಾರಿ ಜೋಸೆಫ್ ಮತ್ತು ತೋಳುಗಳಲ್ಲಿ ಬಾಲ ಯೇಸುವನ್ನು ಎತ್ತಿಕೊಂಡ, ಸೀರೆ ಧರಿಸಿದ ಮದರ್ ಮೇರಿಯ ರೇಖಾಚಿತ್ರಗಳುಳ್ಳ ಮತ್ತು ಉಪನಿಷತ್ತು ಉಲ್ಲೇಖವುಳ್ಳ 'ಭಾರತೀಯ' ಬೈಬಲ್ ಒಂದು ಕೇರಳಾದ್ಯಂತ ಹೊಸ ಅಲೆ ಎಬ್ಬಿಸಿದೆ.

ಇದರಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ, ಬೈಬಲ್‌ನ ಸಾಲುಗಳ ವ್ಯಾಖ್ಯಾನಕ್ಕೆ ಉಪನಿಷತ್ತುಗಳು, ಭಗವದ್ಗೀತೆ ಮತ್ತು ಮನುಸ್ಮೃತಿಯ ಸಾಲುಗಳನ್ನು ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ ಕೆಥೋಲಿಕ್ ಚರ್ಚ್ ವಕ್ತಾರ ಫಾದರ್ ಪಾವ್ಲ್ ಥೆಲೆಕಟ್. ಬೈಬಲ್‌ನ ಸಾಂದರ್ಭಿಕ ಓದುವಿಕೆ ಮತ್ತು ಅರ್ಥೈಸಿಕೊಳ್ಳುವಿಕೆಗಾಗಿ ಈ ಪ್ರಯತ್ನ ಮಾಡಲಾಗಿದೆ ಎಂದಿದ್ದಾರವರು.

ಇದರಲ್ಲಿ ಮಸೀದಿ, ಮಂದಿರ ಮತ್ತು ಚರ್ಚುಗಳಿರುವ, ದಿವಂಗತ ಕ್ರಿಸ್ಟೋಫರ್ ಕೊಯೆಲೋ ಅವರ 24 ರೇಖಾ ಚಿತ್ರಗಳಿವೆ. ಮುಂಬಯಿ ಮೂಲದ ಧಾರ್ಮಿಕ ಪುಸ್ತಕಗಳ ಪ್ರಕಾಶನ ಸಂಸ್ಥೆ ಸೈಂಟ್ ಪೌಲ್ಸ್ ಈ ಭಾರತೀಯ ಬೈಬಲನ್ನು ಹೊರತಂದಿದ್ದು, ಈ ಧರ್ಮಗ್ರಂಥದಲ್ಲಿ ಬೈಬಲ್ ಸಾಲುಗಳ ವ್ಯಾಖ್ಯಾನದಲ್ಲಿ ಮೀರಾಬಾಯಿ, ಮಹಾತ್ಮ ಗಾಂಧಿ ಮತ್ತು ರವೀಂದ್ರನಾಥ ಠಾಗೋರ್ ಅವರ ಉಲ್ಲೇಖಗಳೂ ಇವೆ ಎಂದು ಫಾ.ಥೆಲೆಕಟ್ ಹೇಳಿದ್ದಾರೆ.

ಈ ಹೊಸ ಬೈಬಲ್, ದಿ.ಬರ್ನಾರ್ಡೋ ಹುರಾಲ್ಟ್ ಅವರಿಂದ ಭಾಷಾಂತರಗೊಂಡ, ಫಿಲಿಪ್ಪೀನ್ಸ್‌ನಿಂದ ಪ್ರಕಾಶನಗೊಂಡ ಜನಪ್ರಿಯ ಕ್ರಿಶ್ಚಿಯನ್ ಬೈಬಲ್‌ನ ಸಂಸ್ಕರಿತ ಆವೃತ್ತಿಯಾಗಿದೆ. 1980ರಿಂದೀಚೆಗೆ ಸುಮಾರು 30 ವಿದ್ವಾಂಸರು ಇದಕ್ಕಾಗಿ ಶ್ರಮಿಸಿದ್ದಾರೆ ಮತ್ತು ವ್ಯಾಖ್ಯಾನ ಬರೆದಿದ್ದಾರೆ ಎಂದು ಫಾದರ್ ತಿಳಿಸಿದರು.

ಹೊಸ ಬೈಬಲ್‌ನ ವಿಶಿಷ್ಟ ಲಕ್ಷಣವೆಂದರೆ, ಇತರ ಭಾರತೀಯ ಧರ್ಮಗಳ ಗ್ರಂಥಗಳಲ್ಲಿರುವ ಆಧ್ಯಾತ್ಮಿಕ ಸಂದೇಶಕ್ಕೆ ಮತ್ತು ಬೈಬಲ್‌ಗೆ ಸಂಬಂಧಿತವಾದ ಉಕ್ತಿಗಳಿಗೆ ಉಲ್ಲೇಖವಿದೆ ಎಂದು ಪುಸ್ತಕದ ಮುನ್ನುಡಿಯಲ್ಲಿ ತಿರುವನಂತಪುರ ಆರ್ಚ್‌ಬಿಷಪ್ ಸೋಸಾ ಪಾಕಿಯಂ ಅವರು ಹೇಳಿದ್ದಾರೆ.

ಈ ಬೈಬಲ್‌ನ 6:19.21ರ ಸ್ವರ್ಗದ ಸಂಪತ್ತು ಎಂಬ ಅಧ್ಯಾಯದಲ್ಲಿ, ಭಗವದ್ಗೀತೆಯಲ್ಲಿ ಬರುವ ಪ್ರಖ್ಯಾತ ಉಕ್ತಿ 'ಕರ್ಮಣ್ಯೇವಾಧಿಕಾರಸ್ತೇ, ಮಾ ಫಲೇಷು ಕದಾಚನ' (ಕರ್ಮವನ್ನು ಮಾಡು, ಎಂದಿಗೂ ಫಲ ಅಪೇಕ್ಷಿಸಬೇಡ) ಹಾಗೂ ಮತ್ತೊಂದೆಡೆ, ಯೇಸುವಿನ ಶಿಷ್ಯರ ಮೂರನೇ ಕಾಣಿಸಿಕೊಳ್ಳುವಿಕೆಯ ಕುರಿತ ಪಠ್ಯದಲ್ಲಿ, ಗೀತಾಂಜಲಿXLV ಯಿಂದ ಆಯ್ದ 'ದೇವರು ನಮ್ಮ ಜೀವನದ ತೀರದಲ್ಲಿ ಪ್ರತಿಕ್ಷಣ, ಪ್ರತಿ ಕಾಲ, ಪ್ರತಿ ದಿನ, ಪ್ರತಿ ರಾತ್ರಿ ಕಾಣಿಸುತ್ತಾನೆ, ಕಾಣಿಸುತ್ತಲೇ ಇರುತ್ತಾನೆ' ಎಂಬುದನ್ನೂ ಉಲ್ಲೇಖಿಸಲಾಗಿದೆ. ಇದಲ್ಲದೆ, ಮಹಾಭಾರತ, ಸೂರ್ಯನ ಆರಾಧನೆಯ ಗಾಯತ್ರಿ ಮಂತ್ರ ಉಲ್ಲೇಖವೂ ಇದೆ.

ಭಾರತಕ್ಕೆ ಹೆಚ್ಚು ಪ್ರಸ್ತುತವಾಗುವ ಬೈಬಲ್ ರಚನೆಯ ಪ್ರಯತ್ನವಿದಾಗಿದೆ. ಮೂಲ ಬೈಬಲ್ ಪಠ್ಯದಿಂದ ಯಾವುದನ್ನೂ ತೆಗೆಯಲಾಗಿಲ್ಲ ಮತ್ತು ಸೇರಿಸಲೂ ಇಲ್ಲ ಎಂದು ಫಾ.ಥೆಲೆಕಟ್ ಹೇಳಿದ್ದಾರೆ.

ಹಿಂದೂಧರ್ಮದಲ್ಲಿ, ಬೆಳಕಿನ ಅಧಿದೇವತೆ ಭಗವಾನ್ ಭಾಸ್ಕರನನ್ನು ಪೂಜಿಸುವ ಗಾಯತ್ರಿ ಮಂತ್ರವಿದೆ. ನಮಗೆ ಯೇಸು ಕ್ರಿಸ್ತನೇ ಬೆಳಕು. ಹೀಗಾಗಿ, ಮಾನವ ಬದುಕನ್ನು ಬೆಳಗಿಸುವ ಪವಿತ್ರ ಪ್ರಕಾಶವನ್ನು ಪ್ರಾರ್ಥಿಸುವುದಕ್ಕಾಗಿ ನಾವಿದನ್ನು ಬಳಸಬಹುದು ಎನ್ನುತ್ತಾರೆ ಈ ಬೈಬಲ್ ಪ್ರಕಾಶನಕ್ಕೆ 'ನಿರಾಕ್ಷೇಪಣ ಪತ್ರ' ನೀಡುವ ಅಧಿಕೃತ ಕ್ರಿಶ್ಚಿಯನ್ ಸಂಸ್ಥೆಯಾದ ಕೆಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ಅಧ್ಯಕ್ಷ, ಬಿಷಪ್ ಥೋಮಸ್ ದಾಬ್ರೆ. ಮುಂಬಯಿಯ ಆರ್ಚ್‌ಬಿಷಪ್ ಅನುಮತಿ ಇಲ್ಲದೆ ಮತ್ತು ನಿರಾಕ್ಷೇಪಣಾ ಪತ್ರವಿಲ್ಲದೆ ಯಾವುದೇ ಬೈಬಲ್ ಅನ್ನು ಮುದ್ರಿಸುವಂತಿಲ್ಲ.
ಮತ್ತಷ್ಟು
ಸ್ಫೋಟ: ಏಳು ಶಂಕಿತರ ರೇಖಾಚಿತ್ರ ಬಿಡುಗಡೆ
ಅಣು ಒಪ್ಪಂದ: ಸೆಪ್ಟೆಂಬರ್‌ನಲ್ಲಿ ಸಿಂಗ್-ಬುಷ್ ಭೇಟಿ?
ಗರ್ಭಪಾತದ ಸಂದಿಗ್ಧತೆಯಲ್ಲಿ ಮೆಹ್ತಾ ದಂಪತಿ
ಸದ್ಯವೇ ತೃತೀಯ ರಂಗ ರೂಪುಗೊಳ್ಳಲಿದೆ: ಕಾರಟ್
ಕೋಲ್ಕತಾ ಗ್ರಂಥಾಲಯದಿಂದ ಅಪರೂಪದ ಪುಸ್ತಕಗಳು ಕಾಣೆ
ಕೇರಳ: ಭಾನುವಾರ ಪೆಟ್ರೋಲ್ ಪಂಪ್‌ಗೆ ರಜೆ?