ಅಮರನಾಥ ಮಂದಿರ ಮಂಡಳಿಯ ಪುನರ್ ರಚನೆಗೆ ಅನುಕೂಲವಾಗುವ ನಿಟ್ಟಿನಲ್ಲಿ, ಮಂಡಳಿಯ ಎಲ್ಲಾ ಹತ್ತು ಸದಸ್ಯರು ಜಮ್ಮು ಕಾಶ್ಮೀರ ರಾಜ್ಯಪಾಲ ಎನ್.ಎನ್.ವೋಹ್ರಾ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ಏತನ್ಮಧ್ಯೆ, ಜಮ್ಮುವಿನಲ್ಲಿ ಪ್ರತಿಭಟನಾ ನಿರತವಾಗಿರುವ ಅಮರನಾಥ ಸಂಘರ್ಷ ಸಮಿತಿಯು, ಪ್ರಧಾನಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಕೈಗೊಳ್ಳುವ ಯಾವುದೇ ನಿರ್ಣಯವನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದೆ. ಸಮಿತಿಯನ್ನು ಸರ್ವಪಕ್ಷ ಸಭೆಗೆ ಆಹ್ವಾನಿಸಲಾಗಿಲ್ಲ.
ಸಭೆಗೆ ಸಮಿತಿ ಸದಸ್ಯರನ್ನು ಸೇರ್ಪಡಿಸದ ಹೊರತಾಗಿ, ಸಭೆಯಲ್ಲಿನ ಯಾವುದೇ ನಿರ್ಧಾರವನ್ನು ಸಮಿತಿಯು ಒಪ್ಪಿಕೊಳ್ಳುವುದಿಲ್ಲ. ಇದು ಜನರ ಚಳವಳಿಯಾಗಿದ್ದು, ಜಮ್ಮುವಿನ ಜನರು ಸಭೆಯಲ್ಲಿ ಪಾಲ್ಗೊಳ್ಳದಿದ್ದಲ್ಲಿ ಸಭೆಯಲ್ಲಿ ಕೈಗೊಳ್ಳುವ ಯಾವುದೇ ನಿರ್ಧಾರವು ಅಮಾನ್ಯವಾಗಿದೆ. ಕಳೆದ ಬಾರಿ ಪ್ರಧಾನಮಂತ್ರಿ ಮತ್ತು ರಕ್ಷಣಾ ಸಚಿವರು ಸ್ಥಳಕ್ಕೆ ಆಗಮಿಸಿದ್ದ ವೇಳೆ, ಆಡಳಿತಾಧಿಕಾರಿಗಳನ್ನು ಭೇಟಿ ಮಾಡಿದ್ದರು ಆದರೆ ಜನರನ್ನಲ್ಲ ಎಂದು ಅಮರನಾಥ್ ಸಂಘರ್ಷ ಸಮಿತಿಯ ಸಂಚಾಲಕ ಲೀಲಾ ಕರಣ್ ತಿಳಿಸಿದ್ದಾರೆ.
ಅಮರನಾಥ್ ಭೂವಿವಾದದ ಕುರಿತಾದ ಪ್ರತಿಭಟನೆಯು 38ನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ, ಇಂದು ಪ್ರಧಾನಿ ಸರ್ವಪಕ್ಷ ಸಭೆಯನ್ನು ಕರೆದಿದ್ದು, ಇಷ್ಟು ದಿನಗಳ ನಂತರ ಪ್ರಧಾನಿಗೆ ಈಗ ಎಚ್ಚರಗೊಂಡಿದ್ದಾರೆ ಎಂದು ಅವರು ದೂರಿದ್ದಾರೆ.
|