ಉಗ್ರಗಾಮಿ ಸಂಘಟನೆ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ(ಸಿಮಿ)ದ ಮೇಲಿನ ನಿಷೇಧ ಹಿಂತೆಗೆತದ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಸಿಮಿ ಮೇಲಿನ ನಿಷೇಧ ಮುಂದುವರಿಯಲಿದೆ.
ಇದಲ್ಲದೆ, ಸಿಮಿ ಸಂಘಟನೆಯನ್ನು ಯಾಕೆ ನಿಷೇಧಿಸಬಾರದು ಎಂಬುದಾಗಿ ಪ್ರಶ್ನಿಸಿ ಶ್ರೇಷ್ಠ ನ್ಯಾಯಾಲಯವು ಸಿಮಿಗೆ ನೋಟೀಸು ಕಳುಹಿಸಿದ್ದು, ಪ್ರತಿಕ್ರಿಯೆಗೆ ಮೂರು ವಾರಗಳ ಕಾಲಾವಕಾಶ ನೀಡಿದೆ.
ಸಿಮಿ ಸಂಘಟನೆಯನ್ನು ಯಾಕೆ ನಿಷೇಧಿಸಬೇಕು ಎಂಬುದರ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲು ಕೇಂದ್ರವು ವಿಫಲವಾಗಿದೆ ಎಂದು ಹೇಳುವ ಮೂಲಕ ದೆಹಲಿ ಹೈಕೋರ್ಟ್‌ನ ನ್ಯಾಯಾಧಿಕರಣವು ಸಿಮಿ ಮೇಲಿನ ನಿಷೇಧವನ್ನು ರದ್ದುಪಡಿಸಲು ಮಂಗಳವಾರ ಆದೇಶ ನೀಡಿತ್ತು.
ದೆಹಲಿ ಹೈಕೋರ್ಟ್ ಆದೇಶವನ್ನು ಮರುಪ್ರಶ್ನಿಸಿ, ಕೇಂದ್ರ ಗೃಹಸಚಿವಾಲಯವು ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿತ್ತು. ಇದೀಗ ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ಸಿಮಿ ಮೇಲಿನ ನಿಷೇಧವು ಮುಂದುವರಿಯಲಿದೆ.
|