ಅಮರನಾಥ್ ದೇವಾಲಯದ ಭೂ ಹಸ್ತಾಂತರ ವಿವಾದದ ಕಿಚ್ಚು ಜಮ್ಮು-ಕಾಶ್ಮೀರ ಕಣಿವೆಯಲ್ಲಿ ಬುಧವಾರದಂದು ಮತ್ತಷ್ಟು ಭುಗಿಲೆದ್ದಿದ್ದು, ಪೊಲೀಸರು ನಡೆಸಿದ ಗೋಲಿಬಾರ್‌ಗೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾನೆ.
ಜಮ್ಮು ಕಾಶ್ಮಿರದ ಕಥುವಾ ಜಿಲ್ಲೆಯಲ್ಲಿ ಕರ್ಫ್ಯೂ ಉಲ್ಲಂಘಿಸಿ ಸೇನಾಪಡೆಗಳ ಮೇಲೆ ಕಲ್ಲುತೂರಾಟ ನಡೆಸುತ್ತಿರುವ ಗುಂಪನ್ನು ಚದುರಿಸಲು ಸೇನಾಪಡೆಗಳು ಗುಂಡಿನ ದಾಳಿ ನಡೆಸಿದಾಗ ಈ ಘಟನೆ ಸಂಭವಿಸಿತು ಎಂದು ಸೇನಾಪಡೆಗಳ ವಕ್ತಾರರು ತಿಳಿಸಿದ್ದಾರೆ.
ಅಮರನಾಥ್ ಭೂ ವಿವಾದದ ಹಿನ್ನೆಲೆಯಲ್ಲಿ ಅಮರನಾಥ್ ದೇವಾಲಯ ಮಂಡಳಿಯ ಹತ್ತು ಮಂದಿ ಸದಸ್ಯರು ಬುಧವಾರದಂದು ರಾಜೀನಾಮೆ ನೀಡಿದ್ದರು. ಜಮ್ಮುವಿನಾದ್ಯಂತ ಹಿಂಸಾಚಾರ ಭುಗಿಲೆದ್ದಿದ್ದು, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ಪರಿಸ್ಥಿತಿ ನಿಯಂತ್ರಣಕ್ಕೆ ಸೇನೆಯನ್ನು ಕರೆಸಿದ್ದರೂ ಕೂಡ, ಆಕ್ರೋಶಿತ ಪ್ರತಿಭಟನಾಕಾರರು ಯಾವುದೇ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ, ಗೋಲಿಬಾರ್‌ಗೂ ಜಗ್ಗದೆ ಹಿಂಸಾಚಾರವನ್ನು ಮುಂದುವರಿಸಿದ್ದಾರೆ.
ಅಂಗಡಿ, ವಾಣಿಜ್ಯ ಮಳಿಗೆ, ಶೈಕ್ಷಣಿಕ ಸಂಸ್ಥೆಗಳು ಕಣಿವೆ ಪ್ರದೇಶದಲ್ಲಿ ಇಂದು ಕೂಡ ಬಂದ್ ಆಚರಿಸಿದ್ದವು. ರಸ್ತೆಗಳಲ್ಲಿ ವಾಹವ ಸಂಚಾರವಿಲ್ಲದೆ, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಯಿಂದ ರಸ್ತೆಯಲ್ಲಿ ಕಲ್ಲುಗಳ ರಾಶಿಯೇ ತುಂಬಿದ್ದವು.
|