ನವದೆಹಲಿ: ಗಲಭೆ ಪೀಡಿತ ಜಮ್ಮು ಕಾಶ್ಮೀರದಲ್ಲಿ ಶಾಂತಿ ಮರುಸ್ಥಾಪನೆಗೆ ಒತ್ತಾಯಿಸಿರುವ ಕೇಂದ್ರ ಸರಕಾರ, ಶಾಂತಿಗಾಗಿ ಸರ್ವಪಕ್ಷಗಳ ನಿಯೋಗವು ರಾಜ್ಯಕ್ಕೆ ಭೇಟಿ ನೀಡಲಿದೆ ಎಂದು ಘೋಷಿಸಿದೆ.
ಪ್ರಧಾನಿ ಮನಮೋಹನ್ ಸಿಂಗ್ ಅವರು ಬುಧವಾರ ರಾತ್ರಿ ಕರೆದಿರುವ ಸರ್ವಪಕ್ಷಗಳ ಸಭೆಯಲ್ಲಿ, ಪಕ್ಷಬೇಧ ಮರೆತ ರಾಜಕೀಯ ಪಕ್ಷಗಳು ಕಣಿವೆ ರಾಜ್ಯದಲ್ಲಿ ಸಹಜ ಪರಿಸ್ಥಿತಿಯ ಮರುಸ್ಥಾಪನೆಗೆ ಮನವಿ ಮಾಡಿದ್ದಾರೆ.
ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ, "ಜಮ್ಮು ಕಾಶ್ಮೀರದಲ್ಲಿ ಮಾತುಕತೆಯ ಪ್ರಕ್ರಿಯೆಯ ಉಪಕ್ರಮಕ್ಕಾಗಿ ವಾತಾವರಣವೊಂದನ್ನು ಸೃಷ್ಟಿಸುವ ಅಗತ್ಯವಿದೆ ಎಂದು ನುಡಿದರು. ಚಳುವಳಿಯಲ್ಲಿ ನಿರತವಾಗಿರುವ ಎಲ್ಲಪಕ್ಷಗಳೊಂದಿಗೂ ತಕ್ಷಣವೇ ಮಾತುಕತೆ ಆರಂಭವಾಗಲಿದೆ ಎಂದು ಗೃಹಸಚಿವ ಶಿವರಾಜ್ ಪಾಟೀಲ್ ಹೇಳಿದ್ದಾರೆ. ಅಲ್ಲದೆ, ಪ್ರಧಾನಿ ಸಿಂಗ್ ಅವರು ಶಾಂತಿಗಾಗಿ ಮನವಿ ಮಾಡಿದ್ದಾರೆ ಎಂದೂ ಅವರು ತಿಳಿಸಿದರು.
ಸಮಿತಿಯು ಮಾತುಕತೆಯ ಅಂಗವಾಗಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪಾಟೀಲ್, ಚಳುವಳಿ ನಡೆಸುತ್ತಿರುವವರೂ ಸೇರಿದಂತೆ ಎಲ್ಲ ಪಕ್ಷಗಳು ಮಾತುಕತೆಯಲ್ಲಿ ಒಳಗೊಳ್ಳಲಿದೆ ಎಂದು ಮಾರುತ್ತರ ನೀಡಿದರು. ಅಲ್ಲದೆ, ರಾಜ್ಯಸರಕಾರವು ಮಾತುಕತೆಯಲ್ಲಿ ಯಾರೆಲ್ಲ ಭಾಗವಹಿಸಬೇಕು ಎಂಬುದನ್ನು ನಿರ್ಧರಿಸಲಿದೆ ಎಂದು ನುಡಿದರು.
ಎಲ್ಲ ರಾಜಕೀಯ ಪಕ್ಷಗಳ ನಾಯಕರನ್ನು ಸಭೆಗೆ ಆಹ್ವಾನಿಸಲಾಗಿದ್ದು, ಕೇಂದ್ರ ಸರಕಾರವು ವಿವಾದ ಇತ್ಯರ್ಥ ಪ್ರಯತ್ನವಾಗಿ ಇದುವರೆಗೆ ಕೈಗೊಂಡಿರುವ ಕ್ರಮಗಳನ್ನು ಸಭೆಗೆ ತಿಳಿಸಲಾಯಿತು. ಅಲ್ಲದೆ ರಾಜ್ಯ ಹಾಗೂ ರಾಷ್ಟ್ರದಲ್ಲಿ ಕೋಮು ಸೌಹಾರ್ದಕ್ಕಾಗಿ ಮನವಿ ಮಾಡಲಾಯಿತು. ಎಂಡಿಎಂಕೆ, ಸಿಕ್ಕಿಂ ಡೆಮಾಕ್ರೆಟಿಕ್ ಫ್ರಂಟ್ ಮತ್ತು ಕೇರಳ ಕಾಂಗ್ರೆಸ್ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ರಾಷ್ಟ್ರೀಯ ಪಕ್ಷಗಳಲ್ಲದೆ, ನ್ಯಾಶನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಸೇರಿದಂತೆ ಎಲ್ಲಾ ಪ್ರಾದೇಶಿಕ ಪಕ್ಷಗಳು ಸಭೆಯಲ್ಲಿ ಭಾಗವಹಿಸಿದ್ದವು.
ಸಭೆಯಲ್ಲಿ ಎಲ್ಲಾ ನಾಯಕರೂ, ಪರಿಸ್ಥಿತಿ ಗಂಭೀರವಾಗಿದೆ ಹಾಗೂ ತಕ್ಷಣವೇ ಪರಿಹಾರ ಕ್ರಮಕೈಗೊಳ್ಳಬೇಕು ಎಂಬ ಒಮ್ಮತಾಭಿಪ್ರಾಯಕ್ಕೆ ಬಂದಿದ್ದಾರೆ.
|