ವೇಶ್ಯಾವಟಿಕೆ ವೃತ್ತಿಯನ್ನು ಕಾನೂನುಬದ್ಧಗೊಳಿಸಬೇಕೆ ಎಂಬ ಚರ್ಚೆಯು ವೃತ್ತಿಯಷ್ಟೇ ಹಳೆಯದಾಗಿದ್ದು, ಈಗ ಮತ್ತೆ ಅದರ ಕುರಿತಾದ ಧ್ವನಿಗಳು ಕೇಳಿಬರುತ್ತಿವೆ. ಅಲ್ಲದೆ, ಲೈಂಗಿಕ ಕಾರ್ಯಕರ್ತರನ್ನು ಭೇಟಿ ಮಾಡುವವರ ಮೇಲೆ ದಂಡ ಹೇರುವ ಕ್ರಮ ಟೀಕೆಯನ್ನು ಎದುರಿಸುತ್ತಿದೆ. ಇದು ವೇಶ್ಯಾವಾಟಿಕೆಯನ್ನು ಇನ್ನಷ್ಟು ಭೂಗತವಾಗಿಸಲು ಪ್ರಚೋದನೆ ನೀಡುತ್ತದೆ ಎಂದು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ ಪ್ರಧಾನ ನಿರ್ದೇಶಕರು ಹೇಳುತ್ತಾರೆ. ಆದ್ದರಿಂದ, ಲೈಂಗಿಕ ಕಾರ್ಯಕರ್ತರ ಆರೋಗ್ಯ ಪರಿವೀಕ್ಷಣೆಗಾಗಿ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ದೇಶದ ಲಕ್ಷಾಂತರ ಲೈಂಗಿಕ ಕಾರ್ಯಕರ್ತರ ಸಮಸ್ಯೆಗಳಿಗೆ ಧ್ವನಿಯಾಗಿದ್ದ ದರ್ಬಾರ್ ಮಹಿಳಾ ಸಮನ್ವಯ ಸಮಿತಿಯ ಭಾರತಿ ದೇಯ್, ನಮಗೆ ಪಿಎಫ್, ವೈದ್ಯಕೀಯ ವಿಮೆ, ಮತ್ತು ಕಾರ್ಯಸಮಯ ನಿಗದಿ ಮುಂತಾದ ಎಲ್ಲಾ ಸೌಲಭ್ಯಗಳು ಲಭಿಸಬೇಕೆಂದು ಒತ್ತಾಯಿಸಿದ್ದು, ಇವುಗಳು ದೊರಕುವ ಆಶಾಭಾವನೆ ವ್ಯಕ್ತಪಡಿಸಿದ್ದರು.
ಈ ವೃತ್ತಿಯಲ್ಲಿ ತೊಡಗಿಸಿಕೊಂಡವರು, ವೇಶ್ಯಾವಾಟಿಕೆಯನ್ನು ಕಾನೂನುಬದ್ಧವನ್ನಾಗಿಸಿ ಇತರ ವೃತ್ತಿಯಂತೆಯೇ ಪರಿಗಣಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ಪೊಲೀಸ್ ಮತ್ತು ವೇಶ್ಯಾಗೃಹಗಳ ಮಾಲೀಕರಿಂದ ಹಣ ಸುಲಿಗೆ ಮತ್ತು ದಬ್ಬಾಳಿಕೆಯಿಂದ ಮುಕ್ತಿ ಸಿಗುವಂತೆ ಕೋರಿದ್ದಾರೆ. ಆದರೆ ಈ ನ್ಯಾಯಕ್ಕಾಗಿನ ಹೋರಾಟವನ್ನು ಕೆಲವರು ಶೋಷಣೆಗೆ ಅನುಮತಿ ನೀಡಿದಂತೆ ಎಂಬುದಾಗಿ ಬಣ್ಣಿಸಿದ್ದಾರೆ.
ಯಾರೂ ಅತ್ಯಾಚಾರ, ಮಾನವ ಹಕ್ಕುಗಳ ಉಲ್ಲಂಘನೆಯನ್ನು ಕಾನೂನುಬದ್ಧಗೊಳಿಸಿ ಎಂದು ಕೇಳಿಕೊಳ್ಳುವುದಿಲ್ಲ. ವೇಶ್ಯಾವಾಟಿಕೆ ವೃತ್ತಿಯ ಮೂಲಕ ಸಾಕಷ್ಟು ಹಣಗಳಿಸುವ ಕೆಲವೇ ಮಂದಿ ಮಾತ್ರ ಈ ವೃತ್ತಿಯ ಅಭಿವೃದ್ಧಿ ಬಯಸುತ್ತಾರೆ ಎಂದು ಕೆಲವು ಮಾನವಹಕ್ಕುಗಳ ಹೋರಾಟಗಾಗರು ವಾದಿಸುತ್ತಾರೆ.
ಅನಿವಾರ್ಯವಾಗಿ ಈ ಕೂಪಕ್ಕೆ ಬಿದ್ದು ಹಲವಾರು ವರ್ಷಗಳಿಂದ ಈ ದಂಧೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯೊಬ್ಬರ ಅಭಿಪ್ರಾಯದ ಪ್ರಕಾರ, ಬೆಲೆವೆಣ್ಣುಗಳ ಪುನರ್ವಸತಿ ಎಂಬುದೊಂದು ಭ್ರಮೆ ಎಂದು ಹೇಳಿದ್ದಾರೆ. ಸರಕಾರವು ಸಾವಿರಾರು ಶಿಕ್ಷಿತ ಯವಜನತೆಗೆ ಉದ್ಯೋಗ ಕಲ್ಪಿಸಲು ಅಶಕ್ತವಾಗಿದೆ. ಹೀಗಿರುವಾಗ ಅವರು ತಮಗೆ ಉದ್ಯೋಗ ಕಲ್ಪಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.
ಈ ವೃತ್ತಿಯ ಕುರಿತ ಗೌರವಕ್ಕಾಗಿನ ಹೋರಾಟ ಮುಂದುವರಿಯುತ್ತಿರುವಂತೆಯೇ, ವಿಶ್ವದ ಈ ಅತ್ಯಂತ ಪ್ರಾಚೀನ ವೃತ್ತಿಯು ಎಂದಿಗೂ ಕೊನೆಗೊಳ್ಳದು ಎಂದು ಅವರು ಹೇಳಿದ್ದಾರೆ. "ಒಂದೊಮ್ಮೆ ಈ ಕಸುಬು ನಿಂತೇ ಹೋದಲ್ಲಿ ಹುಡುಗಿಯರನ್ನು ಮನೆಗಳಿಂದ ಅಪಹರಿಸಲಾದೀತು. ಮಹಿಳೆಯರಿಗೆ ದಾರಿಯಲ್ಲಿ ನಡೆಯುವುದೇ ಕಷ್ಟವಾದೀತು. ನಾವು ನಮ್ಮ ವೃತ್ತಿಯಿಂದ ಗೌರವಸ್ಥ ಮಹಿಳೆಯರನ್ನು ಕಾಪಾಡುತ್ತೇವೆ" ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ.
|