ಪ್ರಕರಣವೊಂದರ ವಿಚಾರಣೆ ವೇಳೆಗೆ ವಕೀಲರೊಂದಿಗೆ ಕಲಹ ಸಂಭವಿಸಿದ ಪರಿಣಾಮ, ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಬ್ಬರು ವಿಚಾರಣೆಯಿಂದ ಹಿಂದೆ ಸರಿದ ಘಟನೆ ಗುರವಾರ ಸಂಭವಿಸಿದೆ.
ಗಜಿಯಾಬಾದ್ನ ಬಹುಕೋಟಿ ಪ್ರೊವಿಡೆಂಟ್ ಫಂಡ್ ಹಗರಣದ ವಿಚಾರಣೆ ನಡೆಸುತ್ತಿದ್ದ, ಮೂವರು ನ್ಯಾಯಧೀಶರನ್ನೊಳಗೊಂಡ ನ್ಯಾಯ ಪೀಠದ ಮುಖ್ಯಸ್ಥರಾಗಿದ್ದ ಮತ್ತು ಸುಪ್ರೀಂಕೋರ್ಟಿನ ಎರಡನೇ ಅತಿ ಹಿರಿಯ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಬಿ.ಎನ್.ಅಗರ್ವಾಲ್ ಅವರು ಹಿರಿಯ ವಕೀಲ ಶಾಂತಿ ಭೂಷಣ್ ಅವರೊಂದಿಗೆ ಉಂಟಾದ ಮಾತಿನ ಕಲಹದ ಫಲವಾಗಿ ವಿಚಾರಣೆಯಿಂದ ಹಿಂದಕ್ಕೆ ಸರಿದಿದ್ದಾರೆ.
ಶಾಂತಿ ಭೂಷಣ್ ಅವರು, ಹಗರಣದಲ್ಲಿ ಹೆಸರಿಸಲಾಗಿರುವ ನ್ಯಾಯಾಧೀಶರ ವಿರುದ್ಧ ಟ್ರಾನ್ಸ್ಪರೆನ್ಸಿ ಇಂಟರ್ನಾಶನಲ್ನ ದೆಹಲಿ ಘಟಕದ ಪರವಾಗಿ ವಾದಿಸುತ್ತಿದ್ದರು.
ಸುಪ್ರೀಂ ಕೋರ್ಟ್ ಭ್ರಷ್ಟ ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುತ್ತಿದೆ ಎಂದು ಶಾಂತಿ ಭೂಷಣ್ ಅವರು ಆರೋಪಿಸಿದ ಬೆನ್ನಲ್ಲೇ, ಅಗರ್ವಾಲ್ ವಿಚಾರಣೆಯನ್ನು ನಡೆಸಲು ಆಕ್ಷೇಪಿಸಿದ್ದಾರೆ.
ಅಲಹಾಬಾದ್ ಹೈಕೋರ್ಟ್ನ 26 ನ್ಯಾಯಾಧೀಶರು ಮತ್ತು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರು ಪಿಎಫ್ ಹಗರಣದಲ್ಲಿ ಭಾಗಯಾಗಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಉತ್ತರಪ್ರದೇಶದ ಗಜಿಯಾಬಾದ್ ಜಿಲ್ಲೆಯ ನ್ಯಾಯಾಲಯದ ಖಜಾನೆಯಿಂದ ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಪ್ರಕರಣದ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲು ನ್ಯಾಯಮೂರ್ತಿ ಅಗರ್ವಾಲ್ ಅವರು ಪ್ರಕರಣವನ್ನು ಮುಖ್ಯನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್ ಅವರಿಗೆ ಶಿಫಾರಸ್ಸು ಮಾಡಿದ್ದಾರೆ.
|