ಅಮರನಾಥ ದೇವಾಲಯಕ್ಕೆ ಜಮೀನು ಹಸ್ತಾಂತರ ಕುರಿತ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ಸರ್ವಪಕ್ಷ ನಿಯೋಗವು ಶನಿವಾರ ಜಮ್ಮುವಿಗೆ ಭೇಟಿ ನೀಡಲಿದ್ದು, ಗೃಹ ಸಚಿವ ಶಿವರಾಜ್ ಪಾಟೀಲ್ ನಿಯೋಗದ ನೇತೃತ್ವ ವಹಿಸಲಿದ್ದಾರೆ. ಬುಧವಾರ ದೆಹಲಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ 35 ರಾಜಕೀಯ ಪಕ್ಷಗಳ ಸಭೆಯಲ್ಲಿ ಸರ್ವಪಕ್ಷ ನಿಯೋಗವನ್ನು ಜಮ್ಮುವಿಗೆ ಕಳುಹಿಸುವ ಬಗ್ಗೆ ನಿರ್ಧರಿಸಲಾಗಿತ್ತು.
ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್, ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರೊಂದಿಗೆ ಗುರುವಾರ ಮಾತುಕತೆಯನ್ನು ನಡೆಸಿದ್ದು, ನಾಲ್ಕು ಗಂಟೆಗಳ ಸರ್ವಪಕ್ಷ ಸಭೆಯಲ್ಲಿ ನಡೆಸಲಾದ ಮಾತುಕತೆಯ ಬಗ್ಗೆ ಚರ್ಚೆ ನಡೆಸಿರುವುದಾಗಿ ತಿಳಿದುಬಂದಿದೆ.
ಸುಮಾರು 30 ನಿಮಿಷಗಳ ಕಾಲ ನಡೆದ ಈ ಸಭೆಯಲ್ಲಿ ಸಂಸತ್ ಕಾರ್ಯದರ್ಶಿ ಕೆ.ಎಂ.ಚಂದ್ರಶೇಖರ್ ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಮಧುಕರ್ ಗುಪ್ತ ಅವರೂ ಭಾಗವಹಿಸಿದ್ದರು.
ಅಮರನಾಥ ದೇವಾಲಯಕ್ಕೆ ಜಮೀನು ಹಸ್ತಾಂತರ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ನಡೆಸುತ್ತಿರುವ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಲು, ಜಮ್ಮುವಿಗೆ ತೆರಳಲಿರುವ ಸರ್ವಪಕ್ಷ ನಿಯೋಗದಲ್ಲಿ ಭಾಗವಹಿಸುವಂತೆ ಗೃಹ ಸಚಿವಾಲಯವು ಎಲ್ಲಾ ರಾಜಕೀಯ ಪಕ್ಷಗಳಿಗೆ ಆಮಂತ್ರಣ ನೀಡಿದೆ.
|