ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ನಾಟಕೀಯವಾಗಿ ಪಶ್ಚಿಮಬಂಗಾಲದಿಂದ ಹೊರನಡೆದಿದ್ದ ವಿವಾದಿದ ಬಾಂಗ್ಲಾ ಲೇಖಕಿ ತಸ್ಲೀಮಾ ನಸ್ರೀನ್, ನಾಲ್ಕು ತಿಂಗಳ ಕಾಲ ಸ್ವೀಡನ್‌ನಲ್ಲಿ ನೆಲೆಸಿದ ಬಳಿಕ ಶುಕ್ರವಾರ ಮುಂಜಾನೆ ಭಾರತಕ್ಕೆ ಮರಳಿದ್ದಾರೆ.
ತನ್ನ ವಿವಾದಿತ ಬರಹದ ಮೂಲಕ ಇಸ್ಲಾಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿರುವ 45 ವರ್ಷಗಳ ಬಾಂಗ್ಲಾದೇಶ ಲೇಖಕಿ, ಇಂದು ಮುಂಜಾನೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ರಕ್ಷಣಾ ಸಿಬ್ಬಂದಿಗಳನ್ನು ತಸ್ಲೀಮಾ ಅವರನ್ನು ನಿಗೂಢ ಸ್ಥಳಕ್ಕೆ ಕರೆದೊಯ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
'ಲಜ್ಜಾ' ಪುಸ್ತಕದ ಪ್ರಕಟಣೆಗಾಗಿ ಬಾಂಗ್ಲಾದಿಂದ ಗಡಿಪಾರುಗೊಂಡಿರುವ ತಸ್ಲೀಮಾ ನಸ್ರೀಮಾ ಅವರ ಭವಿಷ್ಯದ ನಿರ್ಧಾರವು ಏನೆಂದು ತಿಳಿದುಬಂದಿಲ್ಲ. ತಸ್ಲೀಮಾ ಅವರ ವೀಸಾ ಅವಧಿಯು ಆಗಸ್ಟ್ 12ಕ್ಕೆ ಅಂತ್ಯಗೊಳ್ಳುತ್ತದೆ. ಭಾರತದಲ್ಲಿ ಖಾಯಂ ವಾಸಕ್ಕೆ ಅನುಮತಿ ನೀಡುವಂತೆ ತಸ್ಲೀಮಾ ಅವರು ಸರಕಾರಕ್ಕೆ ಮನವಿ ಮಾಡುತ್ತಲೇ ಇದ್ದಾರಾದರೂ, ಸರಕಾರವು ಇದರ ಬಗ್ಗೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ.
ಸುಮಾರು ನಾಲ್ಕು ತಿಂಗಳಿಗಿಂತಲೂ ಹೆಚ್ಚಿನ ಕಾಲ ದೆಹಲಿಯಲ್ಲಿ ಗೃಹಬಂಧನದಲ್ಲಿದ್ದ ತಸ್ಲೀಮಾ ಮಾರ್ಚ್ 18ರಂದು ಸ್ವೀಡನ್‍ಗೆ ತೆರಳಿದ್ದರು. ಈ ಅವಧಿಯಲ್ಲಿ ಯಾರನ್ನೂ ಭೇಟಿ ಮಾಡಲು ತಸ್ಲೀಮಾಗೆ ಅವಕಾಶ ನೀಡದಿದ್ದ ಕಾರಣ, ಇದನ್ನು 'ಸಾವಿನ ಮನೆ' ಎಂಬುದಾಗಿ ತಸ್ಲೀಮಾ ಬಣ್ಣಿಸಿದ್ದರು.
|