ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್ ಮತ್ತು ಇತರ ಕೆಲವು ಭಾಗಗಳಲ್ಲಿ ಉಂಟಾದ ಭಾರೀ ಮಳೆ ಮತ್ತು ದೀಢೀರ್ ನೆರೆಯಿಂದಾಗಿ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿಯಿಂದ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಅನೇಕ ಪ್ರದೇಶಗಳು ಪ್ರವಾಹಕ್ಕೊಳಗಾಗಿದ್ದು, ಹೈದರಾಬಾದಿನಲ್ಲಿ ಮೂರು ಮನೆ ಕುಸಿದಿದ್ದು, ಪರಿಣಾಮ ಎಂಟು ಮಂದಿ ಮೃತಪಟ್ಟಿದ್ದಾರೆ. ಮೆದಕ್ ಜಿಲ್ಲೆಯಲ್ಲಿ ಮೂವರು ಮತ್ತು ವಿಜಯವಾಡದಲ್ಲಿ ಎರಡು ಮಂದಿ ಸಾವನ್ನಪ್ಪಿದ್ದಾರೆ.
ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಇದು ನೆರೆಯ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ.
ಶುಕ್ರವಾರ ರಾತ್ರಿ ಹೈದರಾಬಾದಿನಲ್ಲಿ 13.6 ಸೆಂಟಿ ಮೀ. ಮಳೆ ದಾಖಲಾಗಿರುವುದಾಗಿ ಹವಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಧಾರಾಕಾರ ಸುರಿದ ಮಳೆಯಿಂದಾಗಿ ರಸ್ತೆ ತಡೆ ಉಂಟಾಗಿದೆಯಲ್ಲದೆ, ವಿದ್ಯುತ್ ಮತ್ತು ದೂರವಾಣಿ ಸಂಪರ್ಕಗಳು ಕಡಿತಗೊಂಡಿದ್ದು, ಇದರಿಂದ ಜನಜೀವನವು ಅಸ್ಥವ್ಯಸ್ಥಗೊಂಡಿದೆ.
ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿಯವರು ಕೃಷ್ಣಜಿಲ್ಲೆಯ ತನ್ನ ಅಧಿಕೃತ ಪ್ರವಾಸ ರದ್ದುಗೊಳಿಸಿದ್ದು, ಉನ್ನತ ಅಧಿಕಾರಿಗಳೊಂದಿಗೆ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಸಮರೋಪಾದಿಯ ನೆರವು ಕಾರ್ಯಗಳಿಗೆ ಆದೇಶ ನೀಡಿರುವ ಅವರು, ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವವರನ್ನು ಇತರೆಡೆಗೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
|