ಆಂಧ್ರಪ್ರದೇಶದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ಭೀಕರ ನೆರೆ ಹಾವಳಿ ಉಂಟಾಗಿದ್ದು,ಪ್ರವಾಹ ಮತ್ತು ಮಳೆಗೆ ಈವರೆಗೆ ಒಟ್ಟು 53ಮಂದಿ ಬಲಿಯಾಗಿದ್ದಾರೆ.
ಮಳೆ ಮತ್ತೂ ಮುಂದುವರಿಯುವ ಸಾಧ್ಯಗಳಿರುವುದಾಗಿ ಹವಾಮಾನ ಇಲಾಖಾ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. ಆಂಧ್ರದ ಕರಾವಳಿ ಭಾಗ ಮತ್ತು ತೆಲಂಗಾಣ ಸೀಮೆಯಲ್ಲಿರುವ ಎಂಟು ಜಿಲ್ಲೆಗಳು ಹಾಗೂ ರಾಜಧಾನಿ ಹೈದರಾಬಾದ್ ಹೆಚ್ಚಾಗಿ ವರುಣನ ಅವಕೃಪೆಗೆ ಒಳಗಾಗಿವೆ. ಸುಮಾರು ನೂರಾರು ಮಂದಿ ಮನೆಮಠ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ.
ಹಲವಾರು ಕೆರೆ ಕಟ್ಟೆಗಳು,ಉಪನದಿಗಳು ತುಂಬಿ ಹರಿದು ತಮ್ಮ ಅಕ್ಕಪಕ್ಕದ ಹಳ್ಳಿಗಳನ್ನು ನುಂಗಿ ಹಾಕಿವೆ. ಹೈದರಬಾದ್ ನಗರದಲ್ಲಿರುವ 50ಕ್ಕೂ ಹೆಚ್ಚು ವಸತಿ ಪ್ರದೇಶಗಳು ಅಪಾರ ಹಾನಿ ಅನುಭವಿಸಿವೆ.
ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಜನಜೀವನ ಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಪ್ರಮುಖ ಪಟ್ಟಣಗಳ ನಡುವೆ ವಾಹನ ಸಂಚಾರ ಬಹುತೇಕ ಸ್ಥಗಿತಗೊಂಡಿಗೆ.ಹೈದರಾಬಾದ್ ವಿಜಯವಾಡ ಹಾಗೂ ಭದ್ರಾಚಲಂ - ವಿಜಯವಾಡ ರಸ್ತೆಗಳಲ್ಲಿ ವಾಹನಗಳು ಸಾಲಾಗಿ ನಿಂತುಬಿಟ್ಟಿವೆ.
|