ಲಕ್ನೋ: ಕಳೆದ ಬಜೆಟ್‌ನಲ್ಲಿ ಕೇಂದ್ರ ಸರಕಾರ ಸಾಲಮನ್ನಾ ಮಾಡಿರುವ ಫಲಾನುಭವಿ ರೈತರಿಗೆ ಪ್ರಧಾನಿ ಮನಮೋಹನ್ ಸಿಂಗ್ ಪತ್ರಬರೆದಿದ್ದು ಅವರ 'ಬೆಂಬಲ' ಕೋರಿದ್ದಾರೆ.
"ಪ್ರಧಾನಿ ಮನಮೋಹನ್ ಸಿಂಗ್ ಅವರು ರೈತರಿಗೆ ಪತ್ರ ಬರೆದಿದ್ದು ಅವರ ಬೆಂಬಲ ಯಾಚಿಸಿದ್ದಾರೆ. ರೈತರಿಗೆ ಪತ್ರವು ಸದ್ಯವೇ ತಲುಪಲಿದೆ. 70 ಸಾವಿರ ಕೋಟಿ ಸಾಲ ಮನ್ನಾವು ರಾಷ್ಟ್ರದ ಕೋಟ್ಯಂತರ ರೈತರಿಗೆ ಸಹಕಾರಿಯಾಗಲಿದೆ. ಈ ಪತ್ರಗಳನ್ನು ಪಕ್ಷದ ಕಾರ್ಯಕರ್ತರು ವೈಯಕ್ತಿಕವಾಗಿ ರೈತರಿಗೆ ತಲುಪಿಸಲಿದ್ದಾರೆ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಉಳಿದಿರುವ ಹಿನ್ನೆಲೆಯಲ್ಲಿ ಕಾಂಗ್ರಸ್ ಜನತೆಯನ್ನು ಒಲೈಸಲು ಹೊರಟಿರುವ ಕಾಂಗ್ರೆಸ್, ಯುಪಿಎ ಸರಕಾರ ಜನತೆಯ ಕಲ್ಯಾಣಕ್ಕಾಗಿ ಉಪಕ್ರಮಗಳನ್ನು ಹಮ್ಮಿಕೊಂಡಿದೆ ಎಂಬ ಸಂದೇಶ ಸಾರಲು ಹೊರಟಿದೆ.
ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿಗೆ ಹೊರಟಿರುವ ಕಾಂಗ್ರೆಸ್, ಫಲಾನುಭವಿ ಕುಟಂಬಗಳಿಂದ ಕನಿಷ್ಠ ಇಬ್ಬರು ಅಥವಾ ಮೂವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಯೋಜನೆಯನ್ನೂ ಹಮ್ಮಿಕೊಂಡಿದೆ.
ಮುಂದಿನ ಕೆಲವೇ ದಿನಗಳಲ್ಲಿ ಸಾಲಮನ್ನಾ ಪ್ರಯೋಜನ ಪಡೆದಿರುವ ರೈತರ ಹೆಸರು ಬ್ಯಾಂಕುಗಳ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಗ್ರಾಮೀಣ ಪ್ರದೇಶಕ್ಕೆ ಪಕ್ಷವು ತೆರಳಲಿದೆ ಎಂದು ನುಡಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರಿತ ಬಹುಗುಣ ಜೋಷಿ ಅವರು ಯುಪಿಎ ಸರಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಜನತಾ ನ್ಯಾಯಾಲಯಕ್ಕೆ ಒಯ್ಯಲಾಗುವುದು ಎಂದು ನುಡಿದರು.
|