ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ವೇಳೆ ಯಾವುದೇ ಭಯೋತ್ಪಾದನಾ ದಾಳಿಯನ್ನು ತಡೆಯುವ ನಿಟ್ಟಿನಲ್ಲಿ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಗರಾದ್ಯಂತ ನೂರಾರು ಪೊಲೀಸರನ್ನು ನಿಯೋಜಿಸಲಾಗಿದ್ದು, ವ್ಯಾಪಕ ತಪಾಸಣೆ ನಡೆಸಲಾಗುತ್ತಿದೆ.
ಸತತ ಐದನೆ ಬಾರಿಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ಭಾಷಣ ಮಾಡಲಿದ್ದು, ದೆಹಲಿ ಪೊಲೀಸ್ ಹಾಗೂ ಅರೆಸೇನಾಪಡೆಯ ಸಿಬ್ಬಂದಿಗಳನ್ನು ಈಗಾಗಲೇ ಕೆಂಪುಕೋಟೆಯಲ್ಲಿ ನಿಯೋಜಿಸಲಾಗಿದೆ.
ಕೆಂಪುಕೋಟೆ ಮತ್ತು ಸುತ್ತಲ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಸಿಬ್ಬಂದಿಗಳು ನಿರಂತರ ಪರಾಮರ್ಷೆ ಮಾಡುತ್ತಿದ್ದಾರೆ ಎಂದು ದೆಹಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೆಲದಿಂದ ಆಕಾಶದ ತನಕ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿದೆ. 17ನೆ ಶತಮಾನದ ಮೊಗಲರ ಐತಿಹಾಸಿಕ ಸ್ಮಾರಕವಾಗಿರುವ ಕೆಂಪುಕೋಟೆ ವ್ಯಾಪ್ತಿಯಲ್ಲಿ ವಿಮಾನ ಹಾರಟಗಳನ್ನು ನಿಷೇಧಿಸಲಾಗಿದೆ. ಇದೇವೇಳೆ, ಸಂಸತ್ತು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲು ನಿಲ್ದಾಣಗಳು, ಅಂತಾರಾಜ್ಯ ಬಸ್‌ನಿಲ್ದಾಣಗಳಲ್ಲಿಯೂ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಬೆಂಗಳೂರು ಮತ್ತು ಅಹಮದಾಬಾದ್ ಸರಣಿ ಸ್ಫೋಟಗಳ ಹಿನ್ನೆಲೆಯಲ್ಲಿ ಯಾವುದೇ ವಿಧ್ವಂಸಕ ಕೃತ್ಯಗಳಿಗೂ ಅವಕಾಶ ನೀಡೆವು ಎಂದಿರುವ ಹಿರಿಯ ಅಧಿಕಾರಿ, ಇದುವರೆಗೆ ರಾಷ್ಟ್ರದ ರಾಜಧಾನಿಯಲ್ಲಿ ಯಾವುದೇ ಬೆದರಿಕೆಯ ಮಾಹಿತಿಗಳಿಲ್ಲ ಎಂದು ಹೇಳಿದ್ದಾರೆ.
ರಾಜ್ಯದೊಳಕ್ಕೆ ಶಂಕಿತ ಉಗ್ರರ ಪ್ರವೇಶವನ್ನು ತಡೆಯುವ ನಿಟ್ಟಿನಲ್ಲಿ ಜಾಗೃತೆ ವಹಿಸಲು ನೆರೆಯ ರಾಜ್ಯಗಳೊಂದಿಗೆ ದೆಹಲಿ ಪೊಲೀಸ್ ಸಮನ್ವಯ ಸಮಿತಿ ಸಭೆ ನಡೆಸಿರುವುದಾಗಿಯೂ ಅವರು ಹೇಳಿದ್ದಾರೆ.
|