ಕಾಶ್ಮೀರ ಕಣಿವೆಯಲ್ಲಿ ಮಂಗಳವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಬಂಡಿಪುರ ಎಂಬಲ್ಲಿ ಗುಂಪುಚದುರಿಸಲು ಭದ್ರತಾ ಪಡೆಗಳು ಪ್ರತಿಭಟನಾಕಾರರತ್ತ ಗುಂಡು ಹಾರಿಸಿದಾಗ ಮೂರು ಮಂದಿ ಸಾವನ್ನಪ್ಪಿದ್ದು, ಸೋಮವಾರದಿಂದೀಚೆ ಗುಂಡಿಗೆ ಬಲಿಯಾಗುತ್ತಿರುವವರ ಸಂಖ್ಯೆ ಎಂಟಕ್ಕೇರಿದೆ.
ಸೋಮವಾರ ಗುಂಡೇಟಿನಿಂದ ಸಾವನ್ನಪ್ಪಿರುವ ಹುರಿಯತ್ ನಾಯಕ ಶೇಕ್ ಅಜೀಜ್ ಅವರ ದೇಹವನ್ನು ಇರಿಸಿರುವ ಜಾಮಿಯಾ ಮಸೀದಿ ಹೊರಗಡೆ ಜನತೆ ಸೇರಿದ್ದು ಪರಿಸ್ಥಿತಿ ಉದ್ವಿಗ್ನವಾಗಿತ್ತು. ಇದಲ್ಲದೆ, ಕನಿಷ್ಠಪಕ್ಷ ಇತರ ನಾಲ್ಕು ಗುಂಡು ಹಾರಾಟ ಪ್ರಕರಣಗಳು ಮಂಗಳವಾರ ಬೆಳಗ್ಗಿನಿಂದ ವರದಿಯಾಗಿದೆ.
ಕಾಶ್ಮೀರ ಕಣಿವೆಯಾದ್ಯಂತ ಕರ್ಫ್ಯೂ ಹೇರಲಾಗಿದ್ದರೂ, ಇದನ್ನು ಧಿಕ್ಕರಿಸಿದ ಜನತೆ ಬೀದಿಗಿಳಿದಿದ್ದಾರೆ. ಹುರಿಯತ್ ನಾಯಕ ಶೇಕ್ ಅಬ್ದುಲ್ ಅಜೀಜ್ ಸೇರಿದಂತೆ ಐದು ಮಂದಿ ಸೋಮವಾರ ಪೊಲೀಸರ ಗುಂಡೇಟು ತಗುಲಿ ಸಾವನ್ನಪ್ಪಿದ್ದರು. ಹಣ್ಣಿನ ಬೆಳೆಗಾರರು ಮತ್ತು ವ್ಯಾಪಾರಿಗಳು ಪಾಕಿಸ್ತಾನ ಅಕ್ರಮಿತ ಕಾಶ್ಮೀರದ ಮುಜಾಫರ್‌ಬಾದ್‌ನತ್ತ ಮೆರವಣಿಗೆ ಹೊರಟಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಸೋಮವಾರದ ಹಿಂಸಾಚಾರದ ಕಾವು ಇನ್ನೂ ಹೊಗೆಯಾಡುತ್ತಲೇ ಇದ್ದರೂ, ಮಂಗಳವಾರವೂ ಮುಜಾಫರ್ಬಾದ್ ಜಾಥಾ ನಡೆಸಲು ಹುರಿಯತ್ ಕಾನ್ಫರೆನ್ಸ್ ಕರೆ ನೀಡಿದೆ.
ಇದೀಗ ಅಗಲಿದ ನಾಯಕನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಕರ್ಫ್ಯೂ ಹಿಂಪಡೆಯಬೇಕು ಎಂದು ಹುರಿಯತ್ ಸಂಘಟನೆ ಒತ್ತಾಯಿಸುತ್ತಿದೆ.
ಏತನ್ಮಧ್ಯೆ, ಸೋಮವಾರದ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ವಿಫಲವಾಗಿರುವ ಹಿನ್ನೆಲೆಯಲ್ಲಿ, ಮಂಗಳವಾರವೂ ಸರ್ವಪಕ್ಷಗಳ ಸಭೆ ಹಮ್ಮಿಕೊಳ್ಳಲಾಗಿದೆ.
|