ಜಾರ್ಖಂಡ್‌ನಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿದಿರುವ ಕಾರಣ, ಮುಖ್ಯಮಂತ್ರಿ ಸ್ಥಾನಕ್ಕೆ ಜೆಎಂಎಂ ನಾಯಕ ಶಿಬು ಸೊರೇನ್ ಅವರ ಹೆಸರನ್ನು ಪ್ರಸ್ತಾಪಿಸಲು ಯುಪಿಎ ಮೈತ್ರಿಕೂಟ ಮಂಗಳವಾರ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ, ಜಾರ್ಖಂಡ್‌ನ ಹಾಲಿ ಮುಖ್ಯಮಂತ್ರಿ ಮಧುಕೋಡಾ ಅವರು ಸ್ವಯಂ ಸ್ಥಾನ ತೊರೆಯಬೇಕು ಎಂದು ಹೇಳಿರುವ ಯುಪಿಎ ಇಲ್ಲವಾದರೆ ಬೆಂಬಲ ಹಿಂತೆಗೆಯುವ ಬೆದರಿಕೆ ಹಾಕಿದೆ.
ತಮ್ಮ ನಾಯಕ ಶಿಬು ಸೊರೇನ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದೇ ಇದ್ದಲ್ಲಿ ದೊಡ್ಡ ಅಚ್ಚರಿಯನ್ನು ಎದುರಿಸಬೇಕಾದೀತು ಎಂದು ಜೆಎಂಎಂ ನಾಯಕರು ಕೋಡಾ ಅವರಿಗೆ ಸೋಮವಾರ ಎಚ್ಚರಿಕೆ ನೀಡಿದ್ದರು.
ಕೋಡಾ ಸ್ಥಾನ ತ್ಯಜಿಸದಿದ್ದರೆ ಯಾವುದೇ ಪರಿಣಾಮ ಉಂಟಾದರೂ ಪರವಾಗಿಲ್ಲ ಬೆಂಬಲ ಹಿಂಪಡೆಯಲಾಗುವುದು ಎಂದು ಜೆಎಂಎಂನ ಹಿರಿಯ ನಾಯಕರೊಬ್ಬರು ಹೇಳಿದ್ದರು.
"ರಾಂಚಿಯಲ್ಲಿ ಆಗಸ್ಟ್ 17ರಂದು ಪಕ್ಷದ ಶಾಸಕರು ಮತ್ತು ಸಂಸದರ ಸಭೆ ಕರೆಯಲಾಗಿದೆ ಎಂದು ಹೇಳಿದ್ದ ಅವರು, ನಮ್ಮ ಬೇಡಿಕೆಯನ್ನು ಈಡೇರಿಸುವಲ್ಲಿ ಯುಪಿಎ ವಿಫಲವಾದರೆ, ನಾವು ಬೆಂಬಲ ಹಿಂಪಡೆಯದೆ ಬೇರೆ ವಿಧಿಇಲ್ಲ" ಎಂದು ಸ್ಪಷ್ಟ ಪಡಿಸಿದ್ದರು.
ಜುಲೈ 22ರಂದು ಲೋಕಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಂಡಿಸಿದ್ದ ವಿಶ್ವಾಸ ಮತ ಗೊತ್ತುವಳಿಯ ವೇಳೆಗೆ ಜೆಎಂಎಂ ಬೆಂಬಲ ನೀಡಿದ್ದು, ಇದಕ್ಕೆ ಪ್ರತಿಯಾಗಿ ಸೊರೇನ್ ಅವರನ್ನು ಕೇಂದ್ರದಲ್ಲಿ ಕಲ್ಲಿದ್ದಲು ಖಾತೆ ಸಚಿವರನ್ನಾಗಿ ಮತ್ತು ಪಕ್ಷದ ಇನ್ನೊಬ್ಬ ಸಂಸದರನ್ನು ರಾಜ್ಯ ಸಚಿವರನ್ನಾಗಿ ನೇಮಿಸಬೇಕು ಎಂಬ ಒತ್ತಾಯ ಹೇರಲಾಗಿತ್ತು.
ಆದರೆ ತನ್ನ ಮನಸ್ಸು ಬದಲಿಸಿರುವ ಸೊರೇನ್, ಮುಂದಿನ ಎರಡು ವರ್ಷಗಳ ಅವಧಿಗೆ ಜಾರ್ಖಂಡ್ ಮುಖ್ಯಮಂತ್ರಿಯಾಗುವ ಇಚ್ಚೆವ್ಯಕ್ತಪಡಿಸಿದ್ದಾರೆ. ಇವರ ಇಚ್ಚೆಗೆ ಕಾಂಗ್ರೆಸ್ ಅಡ್ಡಿಯಾಗದಿದ್ದರೂ, ಇದರ ಜವಾಬ್ದಾರಿಯನ್ನು ಮಧುಕೋಡಾ ಅವರಿಗೆ ದಾಟಿಸಿದೆ.
ಮಧು ಕೋಡಾ ಅವರು ಮುಖ್ಯಮಂತ್ರಿಯಾಗುವಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ನಿರ್ಣಾಯಕ ಪಾತ್ರವಹಿಸಿದ್ದು, ಕೋಡಾ ಬದಲಾವಣೆಗೆ ಲಾಲೂ ಸಮ್ಮತಿ ಇಲ್ಲವೆನ್ನಲಾಗಿತ್ತು. ಆದರೆ ಆಗಸ್ಟ್ 17ರ ತನಕ ಏನೇ ಆದರೂ ನಾವು ಕಾಯಲಾರೆವು ಎಂದು ಜೆಎಂಎಂ ಖಡಾಖಂಡಿತವಾಗಿ ಹೇಳಿತ್ತು.
ಜೆಎಂಎಂ ಬೆಂಬಲದಿಂದ ಯುಪಿಎ ಸರಕಾರ ಸ್ಥಿರವಾಯಿತು. ಆದರೆ ಜಾರ್ಖಂಡ್ ಸರಕಾರ ಅಸ್ಥಿರವಾಯಿತು!
|