ಜಮ್ಮುವಿನಲ್ಲಿನ ಉದ್ವಿಗ್ನತೆಯು ತಾರಕಕ್ಕೇರುತ್ತಿದ್ದು, ಪೊಲೀಸ್ ಮತ್ತು ಸೇನೆಯ ಗೋಲಿಬಾರ್‌ನಿಂದಾಗಿ 15 ಮಂದಿ ಸಾವನ್ನಪ್ಪಿದ್ದು, ಇತರ ಸುಮಾರು 100 ಮಂದಿ ಗಾಯಗೊಂಡಿದ್ದಾರೆ.
13 ಸಾವುಗಳು ಕಾಶ್ಮೀರ ಕಣಿವೆಯಲ್ಲಿ ಸಂಭವಿಸಿದ್ದರೆ ಇಬ್ಬರು ಜಮ್ಮುವಿನಲ್ಲಿ ನಡೆದ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೆಹಲಿಯಲ್ಲಿ ಸರಕಾರವು ಎರಡನೇ ಸರ್ವಪಕ್ಷ ಸಭೆಯನ್ನು ಕರೆದಿದೆ.
ಪ್ರತ್ಯೇಕವಾದಿ ನಾಯಕ ಅಬ್ದುಲ್ ಅಜೀಜ್ ಅವರು ರಕ್ಷಣಾ ಪಡೆಗಳ ಗುಂಡುದಾಳಿಗೆ ಬಲಿಯಾದ ನಂತರ, ವಿಧಿಸಿದ್ದ ಕರ್ಫ್ಯೂವನ್ನು ಧಿಕ್ಕರಿಸಿ ಅನೇಕ ಮಂದಿ ರಸ್ತೆಗಿಳಿದಿದ್ದರು. ಇದರೊಂದಿಗೆ ಇತರ ಎರಡು ಮಂದಿ ಸಾವನ್ನಪ್ಪಿದ್ದು, ಹಿಂದು ಮತ್ತು ಮುಸ್ಲಿಮ್ ಜನಾಂಗದವರು ಪರಸ್ಪರ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ನೀಡುವ ಮೂಲಕ ಅಮರನಾಥ್ ಪ್ರತಿಭಟನೆಯು ಕೋಮುಗಲಭೆಗೆ ತಿರುಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.
ಏತನ್ಮಧ್ಯೆ, ಶೇಖ್ ಅಜೀಜ್ ಅವರ ಅಂತ್ಯಕ್ರಿಯೆಗೆ ದೂರದೂರುಗಳಿಂದ ಸುಮಾರು 50,000 ಮಂದಿ ಆಗಮಿಸಿದ್ದರು. ಅಲ್ಲದೆ, ಪ್ರಸಕ್ತ ಗೃಹಬಂಧನದಲ್ಲಿರುವ ಇತರ ಇಬ್ಬರು ಪ್ರತ್ಯೇಕವಾದಿ ನಾಯಕರಾದ ಸೈಯದ್ ಅಲಿ ಗಿಲಾನಿ ಮತ್ತು ಮಿರ್ವೈಜ್ ಫಮರ್ ಫಾರೂಕ್ ಅವರ ಮನೆಯ ಹೊರಭಾಗದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
ಈ ನಡುವೆ, ಹೆಚ್ಚಿದ ಪ್ರತಿಭಟನೆಯಿಂದಾಗಿ, ಶ್ರೀನಗರದ ವಿವಿಧ ಭಾಗಗಳಲ್ಲಿ ಗುಂಡುದಾಳಿಯಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದು, ಶ್ರೀನಗರದ ಹೊರವಲಯ ಲಾಜ್ಸಾನ್‌ನಲ್ಲಿ ಮೂರು ಮಂದಿ ಮತ್ತು ಬಂಡಿಪೋರಾದಲ್ಲಿ ಮೂರು ಹಾಗೂ ಗಾಂದರ್ಬಲ್‌ನಲ್ಲಿ ಒಬ್ಬ ಸಾವನ್ನಪ್ಪಿದ್ದಾರೆ. ಅಜಿಜ್ ದಾಖಲಾದ ಆಸ್ಪತ್ರೆಯ ಸಮೀಪದ ಉರಿ ಟೌನ್‌ನಲ್ಲಿ ಗುಂಡುದಾಳಿಯಲ್ಲಿ ಅನೇಕರು ಗಾಯಗೊಂಡಿದ್ದಾರೆ.
ಮೊಳಗಿದ ಪ್ರತ್ಯೇಕತಾ ಕೂಗು ಜಮ್ಮು ಪ್ರತಿಭಟನೆಯಿಂದಾಗಿ ಕಾಶ್ಮೀರ ಕಣಿವೆಯಲ್ಲಿನ ವ್ಯಾಪಾರ ವಹಿವಾಟುಗಳಿಗೆ ಅಡ್ಡಿಯುಂಟಾಗಿರುವುದು ಕಣಿವೆಯ ಜನತೆಯನ್ನು ಕೆರಳಿಸಿತ್ತು. ಇದನ್ನು ಪ್ರತಿಭಟಿಸಿ, ಹುರಿಯತ್ ಕಾನ್ಫರೆನ್ಸ್ ನೇತೃತ್ವದಲ್ಲಿ ಹಣ್ಣು ಬೆಳೆಗಾರರು ಮತ್ತು ವ್ಯಾಪಾರಿಗಳು ಹಮ್ಮಿಕೊಂಡಿದ್ದ ಜಾಥದ ವೇಳೆಗಿನ ದುರ್ಘಟನೆಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದ್ದವು. ಇದೀಗ ಕಣಿವೆಯಲ್ಲಿ ಪ್ರತ್ಯೇಕತಾವಾದದ ಕೂಗುಗಳು ದಟ್ಟವಾಗಿ ಕೇಳಿಬರುತ್ತಿವೆ.
"ಸ್ವಾತಂತ್ರ್ಯ ಕೋರಿ ಸರಕಾರದ ವಿರುದ್ಧ ಬಹಿರಂಗವಾಗಿ ಘೋಷಣೆಗಳನ್ನು ಕೂಗಲಾಗುತ್ತಿದೆ. ಇದು ಭೂ ಹಸ್ತಾಂತರದ ವಿರುದ್ಧ ಪ್ರತಿಭಟನೆಯಲ್ಲ. ಇದು ಭಾರತದ ವಿರುದ್ಧದ ಕೋಪ" ಎಂದು ಕಾಲೇಜು ಉಪನ್ಯಾಸಕರೊಬ್ಬರು ಹೇಳಿದ್ದಾರೆ.
|