ಬಾಡಿಗೆ ತಾಯಿಗೆ ಜನಿಸಿದ ಜಪಾನಿ ದಂಪತಿಗಳ ಮಗು ಮಂಜಿಗೆ ಜನನ ಪ್ರಮಾಣ ಪತ್ರ ದೊರೆತು, ಜಪಾನ್‌ಗೆ ತೆರಳಲು ಸಿದ್ಧಗೊಂಡಿರುವಂತೆ ಮತ್ತೆ ಕಾನೂನು ತಡೆ ಉಂಟಾಗಿದೆ.
ನಾಲ್ಕು ವಾರಗಳೊಳಗೆ ಮಗುವನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವಂತೆ ರಾಜಸ್ಥಾನ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ನೋಟೀಸ್ ನೀಡಿದೆ.
ಜಪಾನಿ ದಂಪತಿಗಳೊಂದಿಗೆ ನಡೆಸಿದ ಒಪ್ಪಂದವು ಸಿಂಧುವಲ್ಲ ಎಂದು ಜೈಪುರ್ ಮೂಲದ ಸರಕಾರೇತರ ಸಂಸ್ಥೆ(ಎನ್‌ಜಿಒ) ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಆದೇಶವನ್ನು ನೀಡಿದೆ.
ಈ ಕುರಿತಾಗಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದರೊಂದಿಗೆ, ಸಿಬಿಐ ತನಿಖೆಗೂ ಒತ್ತಾಯಿಸಲಿದ್ದೇವೆ ಎಂದು ರಾಜಸ್ಥಾನ ಹೈಕೋರ್ಟ್ ವಕೀಲ ಅಭಿನವ್ ಶರ್ಮಾ ತಿಳಿಸಿದ್ದಾರೆ.
ಭ್ರೂಣವನ್ನು ಬಾಡಿಗೆ ತಾಯಿಯ ಉದರದಲ್ಲಿ ಇರಿಸಿದ ಆರು ತಿಂಗಳ ನಂತರ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಪ್ರಾರಂಭದಲ್ಲಿ ಮಂಜಿಯ ಜಪಾನೀ ಪೋಷಕರು ಈ ಒಪ್ಪಂದಕ್ಕೆ ಸಹಿ ಹಾಕಿರಲಿಲ್ಲ ಎಂಬುದಾಗಿ ದೂರು ಸಲ್ಲಿಸಲಾಗಿದೆ.
ಇದೊಂದು ಮಕ್ಕಳ ಕಳ್ಳಸಾಗಣೆಯ ಪ್ರಕರಣವಾಗುವ ಸಂಭವವಿದೆ ಎಂದು ಎನ್‌ಜಿಒ ಸಂಸ್ಥೆಯ ನಿರ್ದೇಶಕ ಸಂಜಯ್ ಅಗರ್ವಾಲ್ ಹೇಳಿದ್ದಾರೆ. ಎನ್‌ಜಿಒ ಈ ಆಧಾರದಲ್ಲಿ ಮಗುವಿನ ವಶಕ್ಕಾಗಿ ಮನವಿ ಮಾಡಿದೆ.
|