ಜಮ್ಮು ಕಾಶ್ಮೀರ ಪರಿಸ್ಥಿತಿಯ ಕುರಿತು ಆಕ್ಷೇಪಣಾರ್ಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿ ಎಂದು ಬುಧುವಾರ ರಾತ್ರಿ ಭಾರತ ಪಾಕಿಸ್ತಾನಕ್ಕೆ ತಾರೀತು ಮಾಡಿದೆ.
ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಡುತ್ತಿರುವ ಕುರಿತು ವಿಶ್ವಸಂಸ್ಥೆಯನ್ನು ಸಂಪರ್ಕಿಸುವುದಾಗಿ ಪಾಕಿಸ್ತಾನ ಹೇಳಿತ್ತು. ಪಾಕಿಸ್ತಾನದ ಇಂತಹ ಹೇಳಿಕೆಗಳು ರಾಷ್ಟ್ರದ ಆಂತರಿಕ ವಿದ್ಯಮಾನದಲ್ಲಿ ಸ್ಪಷ್ಟವಾದ ಹಸ್ತಕ್ಷೇಪ ಮತ್ತು ಇದು ಸಮಗ್ರ ಮಾತುಕತೆ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರತ್ತದೆ ಎಂದು ಭಾರತ ಹೇಳಿದ್ದರೂ ಇದನ್ನು ಪಾಕಿಸ್ತಾನ ಕಡೆಗಣಿಸಿದೆ.
ಪಾಕಿಸ್ತಾನದ ಪುನರುಚ್ಚರಿತ ಆಡಂಬರದ ಶಬ್ದಗಳ ಹೇಳಿಕೆ ಮತ್ತು ಆಪಾದನೆಗಳು ವಾಸ್ತವವಾಗಿ ತಪ್ಪಾಗಿದ್ದು ಇದಕ್ಕೂ ನೈಜ ಸ್ಥಿತಿಗೂ ಸಂಬಂಧವಿಲ್ಲ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಜಮ್ಮು ಕಾಶ್ಮೀರದ ಬೆಳವಣಿಗೆಗಳ ಕುರಿತು ಪಾಕಿಸ್ತಾನದ ಅಧಿಕೃತ ವಕ್ತಾರ ಹಾಗೂ ಅಲ್ಲಿನ ನಾಯಕರು ನೀಡಿರುವ ಸರಣಿ ಹೇಳಿಕೆಗಳು ತೀವ್ರ ಆಕ್ಷೇಪಣಾರ್ಹವಾದುದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ನವತೇಜ್ ಸರ್ನಾ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸಮುದಾಯ, ವಿಶ್ವಸಂಸ್ಥೆ, ಇಸ್ಲಾಮಿಕ್ ಕಾನ್ಫರೆನ್ಸ್ ಸಂಘಟನೆ ಮತ್ತು ಮಾನವ ಹಕ್ಕುಗಳ ಸಂಘಟನೆಗಳನ್ನು ಸಂಪರ್ಕಿಸಿ ಜಮ್ಮು ಕಾಶ್ಮೀರದ ಕುರಿತು ಗಮನ ಹರಿಸಬೇಕು ಎಂದು ಹೇಳುವುದಾಗಿ ಪಾಕಿಸ್ತಾನದ ವಿದೇಶಾಂಗ ಕಚೇರಿಯು ನೀಡಿರುವ ಹೇಳಿಕೆಯು ಭಾರತವನ್ನು ಕೆರಳಿಸಿದೆ.
ಪಾಕಿಸ್ತಾನದ ರಾಷ್ಟ್ರೀಯ ಶಾಸನ ಸಭೆಯಲ್ಲಿ ಹುರಿಯತ್ ನಾಯಕ ಶೇಕ್ ಅಬ್ದುಲ್ ಅಜೀಜ್ ಸಾವಿಗೆ ಸಂತಾಪಸೂಚನಾ ಮಸೂದೆ ಅಂಗೀಕರಿಸಲಾಗಿತ್ತು.
ಪ್ರತಿಕ್ರಿಯೆಗೆ ವಿಶ್ವಸಂಸ್ಥೆ ನಕಾರ ವಿಶ್ವಸಂಸ್ಥೆಯು ಕಾಶ್ಮೀರ ಪರಿಸ್ಥಿತಿಯ ಅವಲೋಕನ ಮಾಡುತ್ತಿದೆ, ಆದರೆ ಈ ಹಂತದಲ್ಲಿ ಯಾವುದೇ ಹೇಳಿಕೆ ನೀಡಲಾಗದು ಎಂದು ವಿಶ್ವಸಂಸ್ಥೆಯ ವಕ್ತಾರರು ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಅಧಿಕಾರಿಗಳಿಗೆ ಕಾಶ್ಮೀರ ಪರಿಸ್ಥಿತಿಯ ಅರಿವಿದೆ. ಆದರೆ, ಈ ಕುರಿತು ಯಾವುದೇ ಹೇಳೆಗೆ ನೀಡಬೇಕೇ ಎಂಬ ಕುರಿತು ನಿಷ್ಕರ್ಶಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
|