ಖ್ಯಾತ ಆರ್ಥಿಕತಜ್ಞ ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಚಕ್ರವರ್ತಿ ರಂಗರಾಜನ್ ಅವರ ಹೆಸರನ್ನು ರಾಜ್ಯಸಭೆಗೆ ನಾಮನಿರ್ದೇಶನ ಗೊಳಿಸಲಾಗಿದೆ.
ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಕಳೆದ ವಾರ ರಾಜೀನಾಮೆ ನೀಡಿದ್ದ ರಂಗರಾಜನ್, ರಾಜ್ಯಸಭಾದ ಸ್ವತಂತ್ರ ಸದಸ್ಯರಾಗಿ ಮುಂದುವರಿಯಲಿದ್ದಾರೆ.
ಹಿರಿಯ ಗಾಂಧಿವಾಜಿ ನಿರ್ಮಲಾ ದೇಶ್‌ಪಾಂಡೆ ಅವರ ನಿಧನದ ನಂತರ ಮೇಲ್ಮನೆಯಲ್ಲಿ ಖಾಲಿಯಾಗಿದ್ದ ಸ್ಥಾನವನ್ನು ರಂಗರಾಜನ್ ತುಂಬಲಿದ್ದಾರೆ.
ಆರ್ಥಿಕ ವಿಚಾರದ ಚರ್ಚೆಯ ವೇಳೆಗೆ ಕೊಡುಗೆಯನ್ನು ನೀಡುವುದಾಗಿ ಹೇಳಿರುವ ರಂಗರಾಜನ್ ಅಭಿವೃದ್ಧಿ ಹೆಚ್ಚಳ, ಬಡತನ ನಿರ್ಮೂಲನೆ, ಉದ್ಯೋಗ ಅವಕಾಶ ವೃದ್ಧಿ ಮುಂತಾದವುಗಳಿಗೆ ಸಹಾಯವಾಗುವಂತಹ ನೀತಿಗಳಿಗೆ ಬೆಂಬಲ ನೀಡಲು ಸಮರ್ಥವಾಗಿರುವುದಾಗಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ವಿಶ್ವಾಸಿಯಾಗಿದ್ದ ರಂಗರಾಜನ್, ವಿಶೇಷ ಆರ್ಥಿಕ ವಲಯ, ತೈಲ ಬೆಲೆ, ಕೃಷಿ ಉತ್ಪನ್ನಗಳ ಬೆಲೆ ಮುಂತಾದ ಕ್ಲಿಷ್ಟಕರ ವಿಚಾರಗಳಲ್ಲಿ ಪ್ರಧಾನಮಂತ್ರಿಗಳಿಗೆ ಸೂಕ್ತ ಸಲಹೆಯನ್ನು ನೀಡುತ್ತಿದ್ದರು.
ಪೆನ್ಸಿಲ್ವಾನಿಯಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿರುವ ಇವರು, ಆಂಧ್ರಪ್ರದೇಶದ ರಾಜ್ಯಪಾಲರಾಗಿ ಮತ್ತು 12ನೇ ಹಣಕಾಸು ಯೋಜನೆಯ ಅಧ್ಯಕ್ಷರಾಗಿದ್ದರು.
ಅಲ್ಲದೆ, ದೇಶದ ಎರಡನೇ ಅತಿ ದೊಡ್ಡ ನಾಗರಿಕ ಪ್ರಶಸ್ತಿಯಾಗಿರುವ ಪದ್ಮವಿಭೂಷಣ ಪ್ರಶಸ್ತಿಗೂ ಇವರು ಭಾಜನರಾಗಿದ್ದರು.
|