ಹಿಂದೂಗಳ ಹಬ್ಬವಾಗಿರುವ ರಕ್ಷಾಬಂಧನ ದಿನವಾದ ಶನಿವಾರ, ಈಶ್ವರನ ಪವಿತ್ರ ದಂಡವು ಅಮರನಾಥ ದೇವಾಲಯಕ್ಕೆ ತಲುಪುವದರೊಂದಿಗೆ, ಎರಡು ತಿಂಗಳ ವಾರ್ಷಿಕ ಅಮರನಾಥ ಯಾತ್ರೆಯು ಅಂತ್ಯಗೊಂಡಿದೆ.
ಅಮರನಾಥ ಯಾತ್ರೆಯ ಕೊನೆಯ ಮತ್ತು ಮೂರನೇ ತಂಗುದಾಣವಾಗಿರುವ ಪಂಚತರ್ಣಿಗೆ ಶುಕ್ರವಾರ ರಾತ್ರಿ ತಲುಪಿದ್ದ, ಚಾರಿ ಮುಬಾರಕ್ ತಂಡದ ಮೇಲ್ವಿಚಾರಕ ಮಹಂತ್ ದೀಪೇಂದ್ರಿ ಗಿರಿ, ಇಂದು ಮುಂಜಾನೆ ಒಂಭತ್ತು ಗಂಟೆಯ ಹೊತ್ತಿಗೆ ದೇವಾಲಯಕ್ಕೆ ತಲುಪಿದರು.
ಸುಮಾರು 250 ಸಾಧುಗಳು ಚಾರಿ ಮುಬಾರಕ್ ಪವಿತ್ರ ದಂಡಕ್ಕೆ ಪೂಜೆ ಸಲ್ಲಿಸಿದರು ಎಂದು ಮೂಲಗಳು ತಿಳಿಸಿವೆ.
ಈ ವರ್ಷ ಅಮರನಾಥ ಯಾತ್ರೆಗೆ ಅಂದಾಜು 5.50 ಲಕ್ಷ ಮಂದಿ ಆಗಮಿಸಿದ್ದು, ಈ ಹಿಂದೆಂದಿಗಿಂತಲೂ ಇದು ಅಧಿಕ ಸಂಖ್ಯೆಯಾಗಿದೆ. 2004ರಲ್ಲಿ ನಾಲ್ಕು ಲಕ್ಷ ಮಂದಿ ಭಕ್ತಾದಿಗಳು ಅಮರನಾಥ ಯಾತ್ರೆಗೆ ಆಗಮಿಸಿದ್ದರು.
ಈ ವರ್ಷ ಯಾತ್ರೆಯ ಸಂದರ್ಭದಲ್ಲಿ ನೈಸರ್ಗಿಕ ವಿಕೋಪಗಳಿಂದಾಗಿ ಸುಮಾರು 68 ಮಂದಿ ಸಾವಿಗೀಡಾಗಿದ್ದಾರೆ.
|