ತನ್ನ ಬೇಡಿಕೆ ಈಡೇರಿಕೆಗೆ ನೀಡಿರುವ ಗಡುವು ಅಂತ್ಯವಾಗಿರುವ ಹಿನ್ನೆಲೆಯಲ್ಲಿ ಜಾರ್ಖಂಡ್‌ನ ಮಧು ಕೋಡಾ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷವು ಭಾನುವಾರ ರಾತ್ರಿ ಹಿಂತೆಗೆದುಕೊಂಡಿದೆ. ಇದರಿಂದಾಗಿ 23 ತಿಂಗಳ ಕೋಡಾ ಸರಕಾರ ಸಂಕಷ್ಟಕ್ಕೆ ಸಿಲುಕಿದೆ.
ಈ ಮಧ್ಯೆ ತನ್ನ ಸ್ಥಾನ ಬಿಟ್ಟುಕೊಡುವುದಿಲ್ಲ ಎಂದಿರುವ ಜಾರ್ಖಂಡ್ ಮುಖ್ಯಮಂತ್ರಿ ಮಧುಕೋಡಾ ತನ್ನ ಬಳಿ ಸಂಖ್ಯಾ ಬಲ ಇರುವುದಾಗಿ ಹೇಳಿದ್ದಾರೆ.
ತನ್ನ ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡಿರುವ ಜೆಎಂಎಂ ಕ್ರಮವನ್ನು 'ಆತುರದ' ನಿರ್ಧಾರ ಎಂದು ಕರೆದಿರುವ ಮಧುಕೋಡಾ, ಪ್ರಸಕ್ತ ಸಮಸ್ಯೆಗೆ ಪರಿಹಾರ ಸಾಧ್ಯವಿದೆ ಎಂದು ಹೇಳಿದ್ದಾರೆ.
ತನ್ನ ಸರಕಾರವು ಅಲ್ಪಸಂಖ್ಯಾತವಲ್ಲ ಎಂದು ಹೇಳಿರುವ ಕೋಡಾ, ತಾನು ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಪುನರುಚ್ಚರಿಸಿದ್ದಾರೆ. ಜೆಎಂಎಂ ಬೆಂಬಲ ವಾಪಸಾತಿ ಪತ್ರವನ್ನು ರಾಜ್ಯಪಾಲ ಸಯೀದ್ ಸಿಬ್ಟೆ ರಾಝಿ ಅವರಿಗೆ ಸಲ್ಲಿಸಿದ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಪಕ್ಷೇತರ ಶಾಸಕರನ್ನು ಓಲೈಸಲು ಆರಂಭಿಸಿರುವ ಕೋಡಾ, ವಿಧಾನ ಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಬೇಕಿರುವಷ್ಟು ಬಹುಮತವನ್ನು ತಾನು ಹೊಂದಿದ್ದೇನೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜುಲೈ 22ರಲ್ಲಿ ಲೋಕಸಭೆಯಲ್ಲಿ ನಡೆದ ವಿಶ್ವಾಸಗೊತ್ತುವಳಿ ಮೇಲಿನ ಮತದಾನದ ಸಂದರ್ಭದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಬೆಂಬಲ ನೀಡಿರುವ ಜೆಎಂಎಂ ಪಕ್ಷವು, ಇದಕ್ಕೆ ಪ್ರತಿಯಾಗಿ ಶಿಬುಸೋರೇನ್ ಅವರನ್ನು ಕಲ್ಲಿದ್ದಲು ಸಚಿವರನ್ನಾಗಿ ಮಾಡಬೇಕು ಎಂದು ಕೋರಿತ್ತು. ಆದರೆ ಮತ್ತೆ ಮನಸ್ಸು ಬದಲಿಸಿದ ಶಿಬು ತನ್ನನ್ನು ಜಾರ್ಖಂಡ್ ಮುಖ್ಯಮಂತ್ರಿಯನ್ನಾಗಿಸಬೇಕೆಂದು ಕೋರಿದ್ದರು. ಇದಕ್ಕೆ ಒಪ್ಪಿಗೆ ನೀಡಿದ್ದ ಯುಪಿಎ ಕೂಟವು ಸ್ಥಾನ ತೊರೆಯುವ ಹೊರೆಯನ್ನು ಮುಖ್ಯಮಂತ್ರಿ ಮಧುಕೊಡಾ ಅವರಿಗೆ ವಹಿಸಿದ್ದರು.
ಸಂಖ್ಯಾಬಲ ಕೋಡಾ ಅವರು 42 ಸದಸ್ಯ ಬೆಂಬಲದ ಯುಪಿಎ ಸರಕಾರದ ನೇತೃತ್ವ ವಹಿಸಿದ್ದಾರೆ. ಇದಲ್ಲದೆ ಇವರಿಗೆ ಪಕ್ಷೇತರರು ಮತ್ತು ಇತರ ಸಣ್ಣಪುಟ್ಟ ಪಕ್ಷಗಳ ಇತರ ಒಂಭತ್ತು ಸದಸ್ಯರ ಬೆಂಬಲ ಇದೆ. ಒಟ್ಟು ಸ್ಥಾನಗಳು 80 ಮ್ಯಾಜಿಕ್ ಸಂಖ್ಯೆ 41
ಪರ ಕಾಂಗ್ರೆಸ್ 9 ಆರ್‌ಜೆಡಿ 7 ಸ್ವತಂತ್ರರು 8 ಎನ್‌ಸಿಪಿ 1
ವಿರುದ್ಧ ಜೆಎಂಎಂ 17 ಬಿಜೆಪಿ 29 ಜೆಡಿಯು 4 ಪಕ್ಷೇತರರು 2
ತಟಸ್ಥರು ಸಿಪಿಐ 1 ಸಿಪಿಐ(ಎಂಎಲ್) 1 ಫಾರ್ವರ್ಡ್ ಬ್ಲಾಕ್ 1
|