ಅಹಮದಾಬಾದ್ ಸರಣಿ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿ ಗುಜರಾತಿನಲ್ಲಿ ಬಂಧಿಸಲಾದ ಒಂಭತ್ತು ಮಂದಿ ಉಗ್ರರನ್ನು ಭಾನುವಾರ ಅಹಮದಾಬಾದಿನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಗಿದ್ದು, ಇವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಜುಲೈ 26ರಂದು ನಡೆಸಲಾಗಿರು ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಶನಿವಾರ ಬಂಧನಕ್ಕೀಡಾಗಿದ್ದ ನಿಷೇಧಿತ ಸಿಮಿ ಸಂಘಟನೆಯ ಕಾರ್ಯಕರ್ತರನ್ನು ಬಿಗಿ ಭದ್ರತೆಯಲ್ಲಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಅಹಮದಾಬಾದ್ ಸರಣಿ ಬಾಂಬ್ ಸ್ಫೋಟದ ರೂವಾರಿ ಮುಫ್ತಿ ಅಬು ಬಶೀರ್‌ನೊಂದಿಗೆ ಈ ಒಂಬತ್ತು ಮಂದಿಯನ್ನು ಬಂಧಿಸಲಾಗಿತ್ತು. ಬಂಧಿತರನ್ನು ಸಮಗ್ರ ವಿಚಾರಣೆಗೆ ಒಳಪಡಿಸುವ ನಿಟ್ಟಿನಲ್ಲಿ ಅವರನ್ನು ದೀರ್ಘಾವಧಿ ಪೊಲೀಸ್ ಕಸ್ಟಡಿಗೆ ಒಪ್ಪಿಸಬೇಕೆಂದು ಪೊಲೀಸರು ಮನವಿ ಮಾಡಿದ ನಂತರ ಮೆಟ್ರೋಪಾಲಿಟನ್ ಮೆಜಿಸ್ಟ್ರೇಟ್ ಜೆ.ಕೆ.ಪಾಂಡ್ಯ ರಿಮಾಂಡ್ ಆದೇಶ ನೀಡಿದರು.
ಜಹೀದ್ ಶೇಖ್, ಇಮ್ರಾನ್ ಶೇಖ್, ಸಾಜಿದ್ ಮನ್ಸೂರಿ, ಇಕ್ಬಾಲ್ ಶೇಖ್, ಶಂಸುದ್ದೀನ್ ಶೇಖ್, ಯೂನುಸ್ ಮನ್ಸೂರಿ, ಗೌಸುದ್ದೀನ್ ಅನ್ಸಾರಿ, ಆರಿಫ್ ಖಾದ್ರಿ ಮತ್ತು ಉಸ್ಮಾನ್ ಅಗರ್‌ಭಾಟಿವಾಲ ಕಾರಾಗೃಹದಲ್ಲಿದ್ದು, ಇವರೆಲ್ಲರೂ 20ರಿಂದ 25ರೊಳಗಿನ ಹರಯದವರಾಗಿದ್ದಾರೆ.
|