ಕಳೆದ ವರ್ಷ ಪಶ್ಚಿಮ ಬಂಗಾಳದಿಂದ ಹೊರದೂಡಲ್ಪಟ್ಟಿದ್ದ ವಿವಾದಿತ ಬಾಂಗ್ಲದೇಶಿ ಬರಹಗಾರ್ತಿ ತಸ್ಲೀಮಾ ನಸ್ರೀನ್ ವೀಸಾ ಅವಧಿಯನ್ನು ಸರಕಾರ ವಿಸ್ತರಿಸಿದೆ ಎಂದು ತಿಳಿದು ಬಂದಿದೆ.
ಇಂದಿಗೆ ಮುಕ್ತಾಯಗೊಳುತ್ತಿರುವ ವೀಸಾ ಅವಧಿಯನ್ನು ವಿಸ್ತರಿಸುವ ಮನವಿಗೆ ಸರಕಾರ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಆದರೆ ವಿಸ್ತರಣಾ ಅವಧಿ ಎಷ್ಟೇಂದು ಸ್ಪಷ್ಟವಾಗಿಲ್ಲ ಮತ್ತು ಈ ಬಗೆಗಿನ ವಿವರಗಳನ್ನು ಗೌಪ್ಯವಾಗಿಡಲಾಗಿದೆ.
ಮುಸ್ಲಿಂ ಮೂಲಭೂತವಾದಿಗಳ ಕ್ರೋಧಕ್ಕೆ ಈಡಾಯಾಗಿ ರಾಷ್ಟ್ರ ತೊರೆದಿದ್ದ 45ರ ಹರೆಯದ ಬಾಂಗ್ಲದೇಶಿ ಬರಹಗಾರ್ತಿ ಈ ತಿಂಗಳ ಆದಿಯಲ್ಲಿ ಸ್ವೀಡನ್‌ನಿಂದ ಭಾರತಕ್ಕೆ ಮರಳಿದ್ದರು. ಅವರನ್ನು ರಕ್ಷಣಾ ಸಂಸ್ಥೆಗಳು ದೆಹಲಿಯ ರಹಸ್ಯ ತಾಣಕ್ಕೆ ಕರೆದೊಯ್ದಿದ್ದಾರೆ.
ವಿವಾದಿತ ಪುಸ್ತಕ 'ಲಜ್ಜಾ'ದ ಮೂಲಕ ಪ್ರಸಿದ್ಧಿಗೆ ಬಂದ ತಸ್ಲೀಮಾರ ಭವಿಷ್ಯದ ಯೋಜನೆಗಳು ಹೊರಬಿದ್ದಿಲ್ಲ. ಈ ವಿವಾದಿತ ಲೇಖಕಿ ಭಾರತದಲ್ಲಿ ಶಾಶ್ವತ ವಾಸಸ್ಥಾನ ನೀಡುವಂತೆ ಬೇಡಿಕೆ ಸಲ್ಲಿಸಿದ್ದು ಈ ಬಗ್ಗೆ ಸರಕಾರ ಯಾವುದೇ ನಿರ್ಣಯ ಕೈಗೊಂಡಿಲ್ಲ.
ದೆಹಲಿಯಲ್ಲಿ 4 ತಿಂಗಳುಗಳ ಇರಿಸಲ್ಪಟ್ಟಿದ್ದ ತಸ್ಲೀಮಾ ಮಾರ್ಚ್ 18ರಂದು ಭಾರತ ತೊರೆದು ಸ್ವೀಡನ್‌ಗೆ ಹೋಗಿದ್ದರು. ಕೊಲ್ಕತಾ ತೊರೆದ ಬಳಿಕ ಒಂದು ದಿನ ಜೈಪುರದಲ್ಲಿ ತಂಗಿದ್ದ ಅವರು ದೆಹಲಿಗೆ ತಲುಪಿದ್ದು, ಅವರನ್ನು ಸರಕಾರ ಅಜ್ಞಾತ ಸ್ಥಳದಲ್ಲಿರಿಸಿತ್ತು. ಈ ಅವಧಿಯಲ್ಲಿ ಯಾವುದೇ ಸಂದರ್ಶಕರನ್ನು ತಸ್ಲೀಮಾ ಭೇಟಿ ಮಾಡವಂತಿರಲಿಲ್ಲ, ಈ ಅನುಭವವನ್ನು ತಸ್ಲೀಮಾ "ಸಾವಿನ ಮನೆಯಲ್ಲಿ ವಾಸ" ಎಂಬುದಾಗಿ ಹೇಳಿದ್ದರು.
|