ಹೊಸ ಔಷಧಿಗಳ ಪ್ರಯೋಗಾಲಯ ಪರೀಕ್ಷೆಗಳಿಂದಾಗಿ ಕಳೆದ ಎರಡುವರೆ ವರ್ಷದಲ್ಲಿ ಸುಮಾರು 49 ಮಕ್ಕಳು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಏಮ್ಸ್)ನಲ್ಲಿ ಸಾವಿಗೀಡಾಗಿವೆ ಎಂದು ವರದಿಯೊಂದು ಹೇಳಿದೆ.
ಜನವರಿ 2006ರಿಂದ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಔಷಧಿ ಪರೀಕ್ಷೆಗಾಗಿ ಒಟ್ಟು 4,142 ಮಕ್ಕಳ ಹೆಸರನ್ನು ನೋಂದಾಯಿಸಲಾಗಿತ್ತು. ಅವುಗಳಲ್ಲಿ 2,728 ಮಕ್ಕಳು ಒಂದುವರ್ಷದ ಒಳಗಿನ ಪ್ರಾಯದವರಾಗಿದ್ದರು.
ಮಾಹಿತಿ ಹಕ್ಕು ಕಾಯ್ದೆಯಡಿ ಎನ್‌ಜಿಓ ಒಂದು ಸಲ್ಲಿಸಿರುವ ಅರ್ಜಿಗೆ ಉತ್ತರಿಸಿರುವ ಸಂಸ್ಥೆಯು ವಿವಿಧ ಔಷಧಿ ಪ್ರಯೋಗಗಳ ಒಟ್ಟು 42 ಪರೀಕ್ಷೆಗಳನ್ನು ಮಾಡಲಾಗಿದ್ದು, ಇವುಗಳಲ್ಲಿ ಮುಂಚೂಣಿಯ ಐದು ಔಷಧಿಗಳು ವಿದೇಶಿ ನಿರ್ಮಿತವಾದುದು ಎಂದು ಹೇಳಿದ್ದಾರೆ.
ಉದಯ್ ಪ್ರತಿಷ್ಠಾನವು ಸಲ್ಲಿಸಿರುವ ಮನವಿಗೆ ಉತ್ತರಿಸಿರುವ ಏಮ್ಸ್, ಅಧ್ಯಯನದ ವೇಳೆ ನೋಂದಾಯಿತ ಮಕ್ಕಳಲ್ಲಿ ಒಟ್ಟು 49 ಸಾವು ಸಂಭವಿಸಿದೆ ಎಂದು ಹೇಳಿದೆ.
ವೈದ್ಯಕೀಯ ಸವಾಲುಗಳನ್ನು ಎದುರಿಸುತ್ತಿರುವ ಮಕ್ಕಳ ಕಲ್ಯಾಣಕ್ಕೋಸ್ಕರ ತಮ್ಮ ಸಂಸ್ಥೆಯು ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ ಉದಯ್ ಸಂಸ್ಥಾನದ ರಾಹುಲ್ ವರ್ಮಾ ಅವರು, "ಜೀವಂತ ಮಕ್ಕಳ ಮೇಲೆ ಪ್ರಯೋಗ ನಡೆಸಲಾಗುತ್ತದೆ ಎಂದು ನಾವು ಕೇಳಿದ್ದೆವು, ಇಲ್ಲವೇ ಓದಿದ್ದೆವು. ಇಂತಹ ಪ್ರಯೋಗಗಳ ಕುರಿತ ವಾಸ್ತವಿಕ ಮಾಹಿತಿ ಬೇಕಿತ್ತು" ಎಂದು ತಿಳಿಸಿದ್ದು, ಈ ಮೂಲಕ ಇದರ ನಿಯಂತ್ರಣಕ್ಕೆ ಸರಕಾರದ ಮೇಲೆ ಒತ್ತಡ ಹೇರಬಹುದಾಗಿದೆ ಎಂದು ಹೇಳಿದ್ದಾರೆ.
ವೈದ್ಯಕೀಯ ಸಂಶೋಧನೆಯ ಭಾರತೀಯ ಮಂಡಳಿ, ಬಯೋ ಟೆಕ್ನಾಲಜಿ ವಿಭಾಗ, ವಿಶ್ವ ಆರೋಗ್ಯ ಸಂಘಟನೆ ಮತ್ತು ಅಮೆರಿಕದ ಜಾನ್ ಹಾಕಿನ್ಸ್ ಬ್ಲೂಮ್‌ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಮತ್ತು ಏಮ್ಸ್‌ಗಳು ಈ ಕಾರ್ಯಕ್ಕೆ ಹಣಕಾಸು ಒದಗಿಸಿವೆ ಎಂದು ವರದಿ ಹೇಳಿದೆ.
|