ಆಗಸ್ಟ್ 25ರೊಳಗೆ ಅಸೆಂಬ್ಲಿಯಲ್ಲಿ ಬಹುಮತ ಸಾಬೀತುಪಡಿಸುವಂತೆ ಜಾರ್ಖಂಡ್ ಮುಖ್ಯಮಂತ್ರಿ ಮಧು ಕೋಡಾ ಅವರಿಗೆ ಜಾರ್ಖಂಡ್ ರಾಜ್ಯಪಾಲ ಸೈಯದ್ ಸಿಬ್ಟಿ ರಾಝಿ ಕರೆ ನೀಡಿದ್ದಾರೆ.
ಈ ಮೊದಲು, ಕೋಡಾ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಸದನದಲ್ಲಿ ಬಹುಮತವನ್ನು ಸಾಬೀತುಪಡಿಸುವುದಾಗಿ ತಿಳಿಸಿದ್ದರು.
ಸುದೀರ್ಘಕಾಲದ ಸಂಪುಟ ಸಭೆ ನಡೆಸಿದ ನಂತರ, ಕೋಡಾ ಒಂಟಿಯಾಗಿ ರಾಜ್ಯಪಾಲರನ್ನು ಭೇಟಿ ಮಾಡಿದ್ದರು. ಸದನದಲ್ಲಿ ಬಹುಮತವನ್ನು ಸಾಬೀತುಪಡಿಸುತ್ತೇನೆ ಎಂದು ಕೋಡಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮುಂಗಾರು ಅವಧಿಯ ಅಧಿವೇಶನವು ಸೆಪ್ಟೆಂಬರ್ 19-25ರ ನಡುವಿನಲ್ಲಿ ನಡೆಯಲಿದೆ.
ಜಾರ್ಖಂಡಿನ ಕೋಡಾ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ರವಿವಾರ ಹಿಂತೆಗೆದುಕೊಂಡಿತ್ತು. 83 ಸದಸ್ಯರ ಸದನದಲ್ಲಿ ಕೋಡಾ ಪ್ರಸಕ್ತ ಕೇವಲ 25 ಶಾಸಕರ ಬೆಂಬಲವನ್ನಷ್ಟೇ ಹೊಂದಿದ್ದಾರೆ.
ಸ್ವತಂತ್ರ ಶಾಸಕರಾಗಿದ್ದ ಕೋಡಾ, ಯುಪಿಎ ಅಂಗಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ಮತ್ತು ಎಂಟು ಇತರ ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿದ್ದರು.
2005ರ ಅಸೆಂಬ್ಲಿ ಚುನಾವಣೆಯ ನಂತರ ಒಂಬತ್ತು ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದ ಜೆಎಂಎಂ ನಾಯಕ ಶಿಬು ಸೊರೇನ್, ಕಳೆದ ಮಂಗಳವಾರ ಮುಖ್ಯಮಂತ್ರಿ ಹಕ್ಕನ್ನು ಕೋರಿದ್ದರು. ಆದರೆ, ಕೋಡಾ ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ನಿರಾಕರಿಸಿದ್ದರು.
ಜುಲೈ 22ರಂದು ಸಂಸತ್ತಿನಲ್ಲಿ ವಿಶ್ವಾಸಮತ ಗೊತ್ತುವಳಿಯಲ್ಲಿ ಮನಮೋಹನ್ ಸಿಂಗ್ ಸರಕಾರಕ್ಕೆ ಬೆಂಬಲ ನೀಡಿದ ನಂತರ, ಸೊರೆನ್ ಕಾಂಗ್ರೆಸ್ ಬೆಂಬಲವನ್ನು ಗಳಿಸಿಕೊಂಡಿದ್ದರು.
|