ದೇಶದಾದ್ಯಂತ ಭೀಕರ ಸ್ಫೋಟಗಳನ್ನು ನಡೆಸಲು ಈವರೆಗೆ ಅಮೋನಿಯಂ ನೈಟ್ರೇಟ್ ಆಧಾರಿತ ಬಾಂಬ್‌ಗಳನ್ನು ಬಳಸಿದ್ದ ನಿಷೇಧಿತ ಸಿಮಿ ಸಂಘಟನೆಯು, ಹೈಡ್ರೋಜನ್ ಪೆರೋಕ್ಸೈಡ್ ಬಳಕೆಯ ಮೂಲಕ ನೂತನ ಮಿಶ್ರಣದೊಂದಿಗೆ ಲಿಕ್ವಿಡ್ ಬಾಂಬ್ ತಯಾರಿಸಲು ಪ್ರಯೋಗ ನಡೆಸಿತ್ತು ಎಂಬುದಾಗಿ ತನಿಖೆಯಿಂದ ತಿಳಿದುಬಂದಿದೆ.
ಸಿಮಿ ಸಂಘಟನೆಯು ತನ್ನ ಕಾರ್ಯಕರ್ತರಿಗೆ ತರಬೇತಿ ನೀಡುವ ಸಲುವಾಗಿ ಡಿಸೆಂಬರ್ 2007ರಲ್ಲಿ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ನಡೆಸಿದ ತರಬೇತಿ ಶಿಬಿರದ ವೇಳೆ, ಎರ್ನಾಕುಲಂನ ವಾಘಮನ್ ಅರಣ್ಯದಲ್ಲಿ ಲಿಕ್ವಿಡ್ ಬಾಂಬ್‌ನ ಪ್ರಯೋಗ ಮಾದರಿಯ ಮೊದಲ ಪ್ರಯೋಗವನ್ನು ಸಿಮಿ ನಡೆಸಿತ್ತು. ಕೇರಳ ಸಿಮಿ ಸಂಘಟನೆಯ ಕಾರ್ಯದರ್ಶಿ ಪೆ.ಎ.ಶಿವ್ಲಿ ಈ ಶಿಬಿರವನ್ನು ಆಯೋಜಿಸಿದ್ದ ಎಂದು ಹೇಳಲಾಗಿದೆ.
ಈ ವರ್ಷ ಮಾರ್ಚ್ 26ರಂದು ಇಂದೋರ್ ಪೊಲೀಸರಿಂದ ಬಂಧನಕ್ಕೊಳಗಾದ ಸಿಮಿ ಪ್ರಧಾನ ಕಾರ್ಯದರ್ಶಿ ಸಪ್ದಾರ್ ನಾಗೋರಿ ವಿಚಾರಣೆಯ ವೇಳೆ ಹೈಡ್ರೋಜನ್ ಪೆರೋಕ್ಸೈಡ್(ಎಚ್2ಒ2) ಪ್ರಯೋಗದ ಮಾಹಿತಿಯು ಬಹಿರಂಗಗೊಂಡಿತ್ತು.
ಅಮೋನಿಯಂ ನೈಟ್ರೇಟ್‌ಗಿಂತ ಲಿಕ್ವಿಡ್ ಬಾಂಬ್‌ಗಳು ಪ್ರಭಾವಶಾಲಿಯಾಗಿದ್ದು, ಮಿಶ್ರಣವನ್ನು ಪ್ಲಾಸ್ಟಿಕ್ ಅಥವಾ ಗಾಜಿನ ಬಾಟಲ್‌ಗಳಲ್ಲಿ, ಸಾಫ್ಟ್ ಡ್ರಿಂಕ್ ಬಾಟಲಿಗಳಲ್ಲಿ ಇಡಬಹುದಾಗಿದೆ ಎಂದು ಮಧ್ಯಪ್ರದೇಶದ ಹಿರಿಯ ವಿಶೇಷ ಕಾರ್ಯ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅಮೋನಿಯನ್ ನೈಟ್ರೇಟ್ ಪೂರೈಕೆಯ ಮೇಲೆ ಸರಕಾರವು ಕಠಿಣ ನಿಷೇಧ ಹೇರುತ್ತದೆ ಎಂದು ಉಗ್ರರು ತಿಳಿದಿರುವುದರಿಂದ, ಎಚ್2ಒ2 ಉತ್ತಮ ಪರ್ಯಾಯ ಮಾರ್ಗವಾಗಿದೆ. ಅಲ್ಲದೆ, ಇದು ಔಷಧಿ ಅಂಗಡಿಗಳಲ್ಲಿ ಸುಲಭವಾಗಿಯೂ ದೊರೆಯುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
|