ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಏಮ್ಸ್)ನ ನೂತನ ಔಷಧಗಳ ಪ್ರಯೋಗದ ವೇಳೆ 49 ಮಕ್ಕಳು ಸಾವಿಗೀಡಾಗಿರುವ ಬಗ್ಗೆ ಮತ್ತು ಈ ಮಕ್ಕಳು ಔಷಧ ಪ್ರಯೋಗ ಪರೀಕ್ಷೆಯಿಂದ ಮೃತಪಟ್ಟಿಲ್ಲ ಎಂಬ ಏಮ್ಸ್‌ನ ಸಮರ್ಥನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡುವಂತೆ ಏಮ್ಸ್ ನಿರ್ದೇಶಕರಿಗೆ ಕೇಂದ್ರವು ಕರೆ ನೀಡಿದೆ.
ಆಡಳಿತ ಮಂಡಳಿಯ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದ್ದು, ಈ ವಿಚಾರದ ಬಗ್ಗೆ ಉನ್ನತ ತನಿಖೆಗೆ ಆದೇಶ ನೀಡಿ ವರದಿ ಸಲ್ಲಿಸುವಂತೆ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಏಮ್ಸ್ ನಿರ್ದೇಶಕರಿಗೆ ಸೂಚಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ನರೇಶ್ ದಯಾಳ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅದಾಗ್ಯೂ, ಈ ಎಲ್ಲಾ 49 ಮಕ್ಕಳು ಅನಾರೋಗ್ಯ ಪೀಡಿತರಾಗಿದ್ದು, ನೈಸರ್ಗಿಕವಾಗಿ ಸಾವನ್ನಪ್ಪಿವೆ. ಔಷಧ ಪರೀಕ್ಷೆಯಿಂದಾಗಿ ಅಲ್ಲ ಎಂದು ಏಮ್ಸ್ ಆಡಳಿತವು ಸ್ಪಷ್ಟಪಡಿಸಿದೆ.
ಲಭ್ಯವಿರುವ ಅಂಕಿಅಂಶಗಳನ್ನು ಆಧರಿಸಿ ನಡೆಸಲಾದ ಸಭೆಯಲ್ಲಿ ಯಾವುದೇ ಮಗುವು ಔಷಧ ಪರೀಕ್ಷೆಯಿಂದ ಮೃತಪಟ್ಟಿಲ್ಲ ಎಂಬುದಾಗಿ ತಿಳಿದುಬಂದಿದೆ ಎಂದು ಶಿಶು ವಿಭಾಗದ ಮುಖ್ಯಸ್ಥ ವಿ.ಕೆ.ಪಾಲ್ ತಿಳಿಸಿದ್ದಾರೆ.
49 ಮಕ್ಕಳಲ್ಲಿ ಕೆಲವು ಮಕ್ಕಳಿಗೆ ಪ್ರಯೋಗಾರ್ಥ ಔಷಧ ಮತ್ತು ಕೆಲವು ಮಕ್ಕಳ ಮೇಲೆ ಗುಣಮಟ್ಟ ಔಷಧಗಳ ಪ್ರಯೋಗವನ್ನು ನಡೆಸಲಾಗಿತ್ತು ಎಂದು ಅವರು ಹೇಳಿದ್ದಾರೆ.
|