ಜಾರ್ಖಂಡ್‌ನಲ್ಲಿನ ರಾಜಕೀಯ ಬೆಳವಣಿಗೆಯು ಕೇಂದ್ರ ಸಂಪುಟ ಪುನಾರಚನೆಯ ಮೇಲೆ ಕರಿನೆರಳು ಬೀರಿದ್ದು, ಜಾರ್ಖಂಡ್ ವಿವಾದವು ಬಗೆಹರಿಯುವವರೆಗೆ ಸಂಪುಟ ಪುನಾರಚನೆ ಸಾಧ್ಯವಾಗುವುದಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರು ತಿಳಿಸಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ವಿಶ್ವಾಸಮತ ಯಾಚನೆ ವೇಳೆಗೆ ಬೆಂಬಲ ನೀಡುವುದಕ್ಕೆ ಪ್ರತಿಯಾಗಿ, ಕೇಂದ್ರ ಸಂಪುಟದಲ್ಲಿ ತನಗೆ ಸ್ಥಾನ ನೀಡುವಂತೆ ಮತ್ತು ತನ್ನ ಪಕ್ಷದ ಸಂಸದರಿಗೆ ರಾಜ್ಯ ಸಚಿವ ಸ್ಥಾನವನ್ನು ನೀಡುವಂತೆ ಜೆಎಂಎಂ ಮುಖ್ಯಸ್ಥ ಶಿಬು ಸೊರೆನ್ ಒತ್ತಾಯಿಸಿದ್ದರು. ಆದರೆ, ಬಳಿಕ ರಾಗಬದಲಿಸಿದ ಅವರು ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿ, ಜಾರ್ಖಂಡ್ ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡಿದ್ದಾರೆ.
ಈ ಮಧ್ಯೆ, ಕಳೆದ ತಿಂಗಳು ಲೋಕಸಭೆಯಲ್ಲಿ ನಡೆದ ವಿಶ್ವಾಸ ಗೊತ್ತುವಳಿಯ ವೇಳೆ ಮನಮೋಹನ್ ಸಿಂಗ್ ಸರಕಾರಕ್ಕೆ ಸಹಾಯ ಮಾಡಿದ ಸಮಾಜವಾದಿ ಪಕ್ಷಕ್ಕೂ ಸಂಪುಟದಲ್ಲಿ ಸ್ಥಾನ ನೀಡುವ ಸಾಧ್ಯತೆಯನ್ನು ಮೂಲಗಳು ತಳ್ಳಿ ಹಾಕಿವೆ.
ಮಧು ಕೋಡಾ ಸರಕಾರದಿಂದ ಜೆಎಂಎಂ ಬೆಂಬಲ ಹಿಂತೆಗೆದುಕೊಂಡ ನಂತರ, ಜಾರ್ಖಂಡ್‌ನ ರಾಜಕೀಯ ಪರಿಸ್ಥಿತಿಯು ಕಂಗೆಟ್ಟು ಹೋಗಿದೆ.
ನೂತನ ಸರಕಾರ ರಚಿಸುವ ಬಗ್ಗೆ ಸೊರೆನ್ ಪಕ್ಷವು ಭರವಸೆ ಹೊಂದಿದ್ದರೆ, ಬಹುಮತ ಸಾಬೀತುಪಡಿಸುತ್ತೇನೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಮಧುಕೋಡಾ ಹೊಂದಿದ್ದಾರೆ.
ಜಾರ್ಖಂಡ್ ವಿವಾದವು ಬಗೆಹರಿಯುವವರೆಗೆ, ಕೇಂದ್ರ ಸಚಿವರ ಸಂಪುಟದಲ್ಲಿ ಜೆಎಂಎಂ ಪಾಲಿನ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ ಮತ್ತು ಸಂಪುಟ ಪುನರ್‌ರಚನೆಯೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ,
|