ಪ್ರತ್ಯೇಕತಾವಾದಿಗಳು ತಮ್ಮ ಪ್ರತಿಭಟನೆಯನ್ನು ಅಮಾನತ್ತುಗೊಳಿಸಿರುವ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಕರ್ಫ್ಯೂ ಸಡಿಲಿಸಲಾಗಿದ್ದು, ಕಳೆದೆಂಟು ದಿನಗಳಿಂದ ತತ್ತರಿಸಿರುವ ಕಣಿವೆಯು ಸಾಮಾನ್ಯ ಸ್ಥಿತಿಗೆ ಮರಳಿದೆ. ಆರ್ಥಿಕ ನಿರ್ಬಂಧವನ್ನು ವಿರೋಧಿಸಿ ನಡೆಸಲಾಗಿದ್ದ ಉಗ್ರ ಪ್ರತಿಭಟನೆಯಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ತೆರಳಿತ್ತು.
ಪ್ರತ್ಯೇಕತವಾದಿಗಳು, ಸಾಮಾಜಿಕ ಸಂಘಟನೆಗಳು, ವ್ಯಾಪಾರಿಗಳು ಮತ್ತು ನೌಕರರ ಮಂಡಳಿಯ ಸಮನ್ವಯ ಸಮಿತಿಯು ಮೂರು ದಿನಗಳ ಕಾಲ ಪ್ರತಿಭಟನೆಯನ್ನು ಅಮಾನತ್ತುಗೊಳಿಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಕರ್ಫ್ಯೂ ಸಡಿಲಿಸಲಾಗಿದೆ ಮತ್ತು ಶಾಲೆ, ಅಂಗಡಿ, ವ್ಯವಹಾರಗಳು ಪುನಾರಂಭಗೊಂಡಿವೆ.
ವಿದ್ಯಾರ್ಥಿಗಳಿಗೆ, ನೌಕರರಿಗೆ ಮತ್ತು ಸಮಾಜದ ಇತರ ವರ್ಗದ ಜನರಿಗೆ ನೆಮ್ಮದಿ ನೀಡುವ ನಿಟ್ಟಿನಲ್ಲಿ ಮೂರು ದಿನಗಳ ಕಾಲ ಪ್ರತಿಭಟನೆಯನ್ನು ಅಮಾನತ್ತುಗೊಳಿಸಲು ಪ್ರತ್ಯೇಕತಾವಾದಿಗಳು ನಿರ್ಧರಿಸಿದ್ದರು.
ಅದಾಗ್ಯೂ, ಪ್ರತ್ಯೇಕತಾವಾದಿ ಸಮೂಹದ ಬೇಡಿಕೆಗಳಿಗೆ ಬೆಂಬಲವೆಂಬಂತೆ, ಕೆಲವು ವಾಹನಗಳು ಮತ್ತು ವ್ಯವಹಾರ ಸಂಸ್ಥೆಗಳು ಕಪ್ಪು ಬಾವುಟಗಳನ್ನು ಹಾರಿಸುತ್ತಿರುವುದು ಕಂಡುಬಂದಿದೆ.
ಅಮರನಾಥ ಭೂ ವಿವಾದದಿಂದಾಗಿ ಕಣಿವೆಯಲ್ಲಿ ಉಂಟಾಗಿದ್ದ ಆರ್ಥಿಕ ನಿರ್ಬಂಧವನ್ನು ಕೊನೆಗೊಳಿಸಿ ಶ್ರೀನಗರ-ಮುಜಾಫರಾಬಾದ್ ರಸ್ತೆಯನ್ನು ಪುನಾರಂಭಿಸುವಂತೆ ಒತ್ತಾಯಿಸಿ, ಪ್ರತ್ಯೇಕತಾವಾದಿಗಳು ಆಗಸ್ಟ್ 11ರಂದು ಪ್ರತಿಭಟನೆಯನ್ನು ಪ್ರಾರಂಭಿಸಿದ್ದರು.
ಈ ಪ್ರತಿಭಟನೆಯ ವೇಳೆ ಕಣಿವೆಯಲ್ಲಿ ಪೊಲೀಸರು ನಡೆಸಿರುವ ಗೋಲಿಬಾರ್‌ನಿಂದಾಗಿ ಸುಮಾರು 22 ಮಂದಿ ಸಾವನ್ನಪ್ಪಿದ್ದರು.
|