ಟಾಟಾ ಮೋಟಾರ್ಸ್ ಸ್ವಾಧೀನಪಡಿಸಿಕೊಂಡಿರುವ 400 ಎಕರೆ ಭೂಮಿಯನ್ನು ರೈತರಿಗೆ ಹಿಂತಿರುಗಿಸುವಂತೆ ಒತ್ತಾಯಿಸಿ ಸಿಂಗೂರಿನ ಟಾಟಾ ಮೋಟಾರ್ಸ್ ಯೋಜನೆಯ ಸ್ಥಳದಲ್ಲಿ ನಡೆಸಲು ನಿರ್ಧರಿಸಿರುವ ತನ್ನ ಪ್ರತಿಭಟನೆಯನ್ನು ಮುಂದೂಡುವಂತೆ, ಪಶ್ಚಿಮ ಬಂಗಾಳದ ಆಡಳಿತಾರೂಢ ಎಡ ರಂಗವು, ತೃಣ ಮೂಲ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳಿಗೆ ಮನವಿ ಮಾಡಿದೆ.
ಈ ಸಮಸ್ಯೆನ್ನು ಬಗೆಹರಿಸುವ ಸಲುವಾಗಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರ ಆಮಂತ್ರಣಕ್ಕೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಒಪ್ಪಿಗೆ ಸೂಚಿಸಿದ ನಂತರ, ಬುಧವಾರ ನಡೆಯಲಿರುವ ಮಾತುಕತೆಯ ಪೂರ್ವಾಭಾವಿಯಾಗಿ, ಸರಕಾರವು ಈ ಮನವಿಯನ್ನು ಮಾಡಿದೆ.
ಅದಾಗ್ಯೂ, ಸರಕಾರದಿಂದ ಸ್ವಾಧೀನಪಡಿಸಿಕೊಂಡ 400 ಎಕರೆ ಜಮೀನನ್ನು ಅದರ ಮಾಲೀಕರಿಗೆ ಹಿಂತಿರುಗಿಸಬೇಕೆಂದು ಮಮತಾ ಪಟ್ಟುಹಿಡಿದಿದ್ದಾರೆ.
ನಾಳೆಯ ಮಾತುಕತೆಯಲ್ಲಿ ಈ ಸಮಸ್ಯೆಗೆ ಪರಿಹಾರ ಉಂಟಾಗುವ ಸಾಧ್ಯತೆ ಇದೆ ಎಂದು ಎಡರಂಗದ ಸಭೆಯ ನಂತರ ಎಡರಂಗ ಅಧ್ಯಕ್ಷ ಭಿಮನ್ ಬೋಸ್ ತಿಳಿಸಿದ್ದಾರೆ.
ಸ್ವಾಧೀನಪಡಿಸಿಕೊಂಡಿರುವ 400 ಎಕರೆ ಜಮೀನು ಅಲ್ಲಲ್ಲಿ ವಿಭಜನೆಗೊಂಡಿದ್ದು, ಅದನ್ನು ಕೃಷಿಗೆ ಬಳಸಲು ಸಾಧ್ಯವಿಲ್ಲ ಎಂದು ಸೂಚಿಸಿರುವ ಅವರು, ಪರಿಸ್ಥಿತಿಯ ನೈಜ ವಿಶ್ಲೇಷಣೆಯನ್ನು ನಡೆಸಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಹಕರಿಸುವಂತೆ ಬ್ಯಾನರ್ಜಿ ಅವರಿಗೆ ಕರೆ ನೀಡಿದ್ದಾರೆ.
|