ದೇಶದ ಅತಿ ಹಿರಿಯ ವ್ಯಕ್ತಿ ಎಂದೇ ಹೇಳಬಹುದಾದ ಜೈಪುರದ ಹಬೀಬ್ ಮಯನ್ ನಿಧನ ಹೊಂದಿದ್ದು. ಅವರಿಗೆ 138 ವರ್ಷ ವಯಸ್ಸಾಗಿತ್ತು. ಅಧಿಕೃತ ದಾಖಲೆಗಳ ಪ್ರಕಾರ, ಮಯನ್ 1870, ಮೇ 20ರಂದು ಅಲ್ವಾರ್ ಜಿಲ್ಲೆಯ ರಾಜ್‌ಗರ್‌ನಲ್ಲಿ ಜನ್ಮ ತಾಳಿದ್ದರು. ಆದರೆ ತಾನು ಇದಕ್ಕಿಂತಲೂ ತುಂಬಾ ವರ್ಷಗಳ ಹಿಂದೆ ಹುಟ್ಟಿದ್ದೆ ಎಂದು ಹಬಿಬ್ ಮಯನ್ ಹೇಳಿಕೊಳ್ಳುತ್ತಿದ್ದರು.
ಸುಮಾರು 139 ಸದಸ್ಯರನ್ನು ಹೊಂದಿದ ದೊಡ್ಡ ಕುಟುಂಬವನ್ನೇ ಹಬೀಬ್ ಹೊಂದಿದ್ದು, ಇದರಲ್ಲಿ ಮೊಮ್ಮಕ್ಕಳ ಸಂಖ್ಯೆಯು ಅಧಿಕವಾಗಿದೆ. ಹಬೀಬ್ ಪತ್ನಿಯು 70 ವರ್ಷಗಳ ಹಿಂದೆಯೇ ತೀರಿ ಹೋಗಿದ್ದಾರೆ. ಜೈಪುರದ ಆಗ್ರಾ ರಸ್ತೆಯಲ್ಲಿರುವ ಪುರಾನಾ ಘಾಟ್ ಪ್ರದೇಶದಲ್ಲಿ ಹಬಿಬ್ ಮಯನ್ ಮೃತಪಟ್ಟಿದ್ದು, ಅವರನ್ನು ಘಾಟ್ ಗೇಟ್ ಸ್ಮಶನಾದಲ್ಲಿ ಹೂಳಲಾಗಿದೆ.
ತಾನು ಇಷ್ಟು ವರ್ಷ ಬದುಕಿರುವುದಕ್ಕೆ ಮತ್ತು ಇಂತಹ ರಕ್ತಪಾತಗಳನ್ನು ನೋಡಲು ಸಾಧ್ಯವಾಗಿರುವುದಕ್ಕೆ ನನಗೆ ಖೇದವಿದೆ ಎಂದು ಜೈಪುರ ಸರಣಿ ಸ್ಫೋಟದ ಬೆನ್ನಲ್ಲೇ ಬಂದ ತನ್ನ ಹುಟ್ಟುಹಬ್ಬದ ದಿನ ಹಬೀಬ್ ಹೇಳಿದ್ದರು.
ಹಬೀಬ್ ಅವರ ನೈಜ ಹೆಸರು ರಹೀಂ ಖಾನ್ ಎಂಬುದಾಗಿದ್ದು, ರಾಜಮನೆತನವೊಂದರ ಕ್ಲಾರಿಯೊನೆಟ್ ವಾದಕರಾಗಿ ಸೇರ್ಪಡೆಗೊಂಡಿದ್ದರು. ನಂತರ, 1938ರಲ್ಲಿ ಈ ವೃತ್ತಿಯಿಂದ ನಿವೃತ್ತರಾಗಿದ್ದರು. ಆ ಸಮಯದಲ್ಲಿ, ಹಬಿಬ್‌ಗೆ ದೊರಕುತ್ತಿದ್ದ ಪಿಂಚಣಿ ಕೇವಲ 1.46 ರೂಪಾಯಿ ಮಾತ್ರ. ನಂತರ ಇದು 2,698ಕ್ಕೆ ಏರಿಕೆಗೊಂಡಿತ್ತು.
ರಾಯಲ್ ಬ್ಯಾಂಡ್‌ನಲ್ಲಿ ಕೆಲಸ ಮಾಡುವ ಮೊದಲು ಹಬೀಬ್ ಮಯನ್ ಕುಟುಂಬವು ರಾಜ್‌ಘರ್‌ನಿಂದ ಜೈಪುರಕ್ಕೆ ತೆರಳಿತ್ತು.
56 ವರ್ಷಗಳ ಹಿಂದೆ ಹಬೀಬ್ ಅವರ ಕಣ್ಣುದೃಷ್ಣಿ ಮಂದವಾಗಿದ್ದು, ಅಂದಿನಿಂದ ತನ್ನ ಮೊಮ್ಮಗನ ಜೊತೆ ಹಬೀಬ್ ವಾಸಿಸುತ್ತಿದ್ದರು ಎಂದು ಅವರ ಕುಟುಂಬ ಸ್ನೇಹಿತ ರಾಜೇಶ್ ನಾಗ್ಪಾಲ್ ಹೇಳುತ್ತಾರೆ. ಎರಡು ವರ್ಷಗಳ ಹಿಂದೆ ಕಾಲಿನ ಮೂಳೆ ಮುರಿದಿದ್ದ ಸಂದರ್ಭದಲ್ಲಿ ಒಂದೇ ಒಂದು ಸಲ ಹಬೀಬ್ ವೈದ್ಯರ ಬಳಿ ತೆರಳಿದ್ದರು.
ತನ್ನ ಬೃಹತ್ ಕಿರಿಯ ಕುಟುಂಬವನ್ನು ಕಂಡ ಹಬೀಬ್, ಸಾಮಾನ್ಯ ಆಹಾರ ಸೇವಿಸುತ್ತಿದ್ದರು. ಬ್ರೆಡ್, ತರಕಾರಿ, ಹಾಲು ಮತ್ತು ಬೇಯಿಸಿದ ಮಾಂಸ ಇವಿಷ್ಟೇ ಅವರು ಸೇವಿಸುತ್ತಿದ್ದ ಆಹಾರವಾಗಿತ್ತು. ಕೆಲವೊಮ್ಮ ಸಿಹಿ ತಿನಿಸು ತರಿಸಿ ಇಷ್ಟಪಟ್ಟು ತಿನ್ನುತ್ತಿದ್ದರು.
ತನ್ನ ದೀರ್ಘಾವಧಿ ಬಾಳಿಕೆಯ ರಹಸ್ಯದ ಬಗ್ಗೆ ಏನೂ ತಿಳಿದಿರದ ಹಬೀಬ್, ನನಗೆ ಗೊತ್ತಿಲ್ಲ ಎಲ್ಲಾ ಅಲ್ಲಾನ ದಯೆ ಎಂದು ಹೇಳುತ್ತಿದ್ದರು.
ಹಬೀಬ್ ಅವರ ಕೊನೆಯ ಆಸೆಯ ಬಗ್ಗೆ ತಿಳಿದುಕೊಂಡ ಅವರ ಸಮುದಾಯದ ಇಬ್ಬರು 2004ರಲ್ಲಿ ಹಬೀಬ್ ಅವರ ಹಜ್ ಯಾತ್ರೆಯನ್ನು ಪ್ರಾಯೋಜಿಸಿದ್ದರು.
|