ಇತ್ತೀಚಿಗೆ ನಡೆದ ಬಾಂಬ್ ಸ್ಫೋಟಗಳಲ್ಲಿ ಸಿಮಿಯ ಕೈವಾಡವಿರುವುದು ಬೆಳಕಿಗೆ ಬಂದಿರುವುದರ ಹಿನ್ನಲೆಯಲ್ಲಿ ಬಿಜೆಪಿಯು ಸಿಮಿ(ಎಸ್‌ಐಎಂಐ) ಸಂಘಟನೆಗೆ ಬೆಂಬಲ ನೀಡುವ ಪಕ್ಷಗಳ ವಿರುದ್ಧ ಧ್ವನಿ ಎತ್ತಿದ್ದು, ಚುನಾವಣಾ ಆಯೋಗ ಇಂತಹ ಪಕ್ಷಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಸಿಮಿ ಮೇಲಿನ ನಿಷೇಧವನ್ನು ಕೇಂದ್ರ ಸರಕಾರ ಸಹಜ ಮತ್ತು ನಿರ್ಲಕ್ಷಿತ ಧೋರಣೆಯಿಂದ ಪರಿಗಣಿಸಿರುವುದರ ಬಗ್ಗೆ ಬಿಜೆಪಿ ಸರಕಾರವನ್ನು ಟೀಕಿಸಿದೆ.
"ಸರಕಾರ ಇತ್ತೀಚಿಗೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿದಾವತ್ ಪ್ರಕಾರ ಜುಲೈ 26ರ ಅಹಮದಾಬಾದ್ ಸ್ಫೋಟ ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ಸ್ಫೋಟಗಳು ಮತ್ತು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಸಿಮಿ ಸಂಘಟನೆ ನಿರತವಾಗಿರುವ 400ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ" ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಹೇಳಿಕೆಯೊಂದರಲ್ಲಿ ತಿಳಿಸಿದರು.
ಮುಂಬಯಿ ಮತ್ತು ಮಲೆಗಾನ್‌ಗಳಲ್ಲಿ ನಡೆದ ಸ್ಫೋಟಗಳಲ್ಲಿ ಸಿಮಿಯ ಕೈವಾಡವಿತ್ತು ಎಂಬುದಾಗಿ ಅಫಿದಾವತ್‌ನಲ್ಲಿ ಪ್ರಸ್ತಾಪಿಸಲಾಗಿದೆ ಮತ್ತು ಉಗ್ರವಾದಿಗಳ ತರಬೇತಿ ಶಿಬಿರಗಳನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಸಿಮಿ ನಾಯಕರು ನಡೆಸಿದ್ದರು ಎಂದು ವಿವರ ನೀಡಲಾಗಿದೆ ಎಂದು ಪ್ರಸಾದ್ ತಿಳಿಸಿದರು.
ಇದರ ಹೊರತಾಗಿಯೂ ಕಾಂಗ್ರೆಸ್‌ನ ಮೂರು ಮಿತ್ರ ಪಕ್ಷಗಳಾದ ಆರ್‌ಜೆಡಿ, ಎಲ್‌ಜೆಪಿ ಮತ್ತು ಎಸ್‌ಪಿ, ಈ ಮೂರು ರಾಜಕೀಯ ಪಕ್ಷಗಳು ಸಿಮಿ ವಿರುದ್ಧದ ನಿಷೇಧವನ್ನು ವಿರೋಧಿಸುತ್ತಿವೆ.
"ಲಾಲು ಪ್ರಸಾದ್ ಯಾದವ್, ರಾಮ್ ವಿಲಾಸ್ ಪಾಸ್ವಾನ್ ಮತ್ತು ಮುಲಾಯಂ ಸಿಂಗ್ ಯಾದವ್ ಅವರು ಬಹಿರಂಗವಾಗಿ ಮತ್ತು ಸಾರ್ವಜನಿಕವಾಗಿ ಸಿಮಿಯನ್ನು ಬೆಂಬಲಿಸಿದ್ದು ಸಿಮಿಯನ್ನು ಬಲಿಪಶುವಾಗಿಸಲಾಗುತ್ತಿದೆ ಎಂದು ಹೇಳಿದ್ದಾರೆ, ಇವರಲ್ಲಿ ಇಬ್ಬರು ಯುಪಿಎ ಸರಕಾರದ ಹಿರಿಯ ಮಂತ್ರಿಗಳು. ಅವರು ಸಿಮಿಯನ್ನು ಸಾಮಾಜಿಕ ಸಂಸ್ಥೆ ಎಂದು ಸಹ ಹೇಳಿದ್ದಾರೆ" ಎಂದು ಪ್ರಸಾದ್ ದೂರಿದ್ದಾರೆ.
ಚುನಾವಣಾ ಆಯೋಗ ಈ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಬೇಡಿಕೆ ಸಲ್ಲಿಸಿದೆ.
|