ಜಾರ್ಖಂಡಿನ ರಾಜಕೀಯ ಬಿಕ್ಕಟ್ಟು ದೆಹಲಿಗೆ ತಲುಪಿದೆ. ಯುಪಿಎ ನಾಯಕರೊಂದಿಗೆ ಮಾತುಕತೆ ನಡೆಸಲು ಹಾಲಿ ಮುಖ್ಯಮಂತ್ರಿ ಮಧುಕೋಡಾ ದೆಹಲಿಗೆ ಆಗಮಿಸಿದ್ದರೆ, ಮುಖ್ಯಮಂತ್ರಿ ಪದಾಕಾಂಕ್ಷಿ ಶಿಬು ಸೊರೇನ್ ಈಗಾಗಲೇ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.
"ನನ್ನ ದೃಷ್ಟಿಕೋನವನ್ನು ಯುಪಿಎ ನಾಯಕರು ಅರಿತುಕೊಳ್ಳಬಹುದೆಂದು ಭಾವಿಸುತ್ತೇನೆ. ರಾಜ್ಯ ಅಭಿವೃದ್ಧಿಗಾಗಿ ತಾನು ಸಾಕಷ್ಟು ಕಾರ್ಯವೆಸಗಿದ್ದೇನೆ"ಎಂದು ಸ್ಥಾನತ್ಯಜಿಸಲು ಇಚ್ಛಿಸದ ಕೋಡಾ ವರದಿಗಾರರೊಂದಿಗೆ ಮಾತನಾಡುತ್ತಾ ನುಡಿದರು.
ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿರುವ ಕೋಡಾರೊಂದಿಗೆ ಉಪಮುಖ್ಯಮಂತ್ರಿ ಸ್ಟೀಪನ್ ಮಾರಾಂಡಿ ಜತೆಯಾಗಿದ್ದಾರೆ. ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಗುರವಾರ ಯುಪಿಎ ನಾಯಕರು ಸೋನಿಯಾ ನಿವಾಸದಲ್ಲಿ ಸಭೆಸೇರಿದ್ದರು. ಸಭೆಯಲ್ಲಿ ಜೆಎಂಎಂ ಮುಖ್ಯಸ್ಥ ಶಿಬು ಸೊರೇನ್, ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಹಾಗೂ ಇತರ ಐವರು ಸಂಸದರು ಪಾಲ್ಗೊಂಡಿದ್ದರು.
ಯಾವುದೇ ಬಿಕ್ಕಟ್ಟನ್ನು ತಡೆಯುವ ಸಲುವಾಗಿ ತನ್ನ ಸ್ಥಾನವನ್ನು ತ್ಯಜಿಸುವಂತೆ ಸ್ವತಂತ್ರ ಶಾಸಕರಾಗಿರುವ ಕೋಡಾರಿಗೆ ಯುಪಿಎ ನಾಯಕತ್ವವು ಮನವರಿಕೆ ಮಾಡಲಿದೆ ಎಂದು ರಾಜಕೀಯ ಮೂಲಗಳು ತಿಳಿಸಿವೆ. ಅದೇನೇ ಇದ್ದರೂ, ಕೋಡಾ ಅವರು ಆಗಸ್ಟ್ 5ರಂದು ನಡೆಯಲಿರುವ ವಿಶ್ವಾಸ ಮತ ಎದುರಿಸಲು ಸಿದ್ಧರಿದ್ದಾರೆ.
ಶಿಬು ಸೊರೇನ್ ನೇತೃತ್ವದ ಜೆಎಂಎಂ ಕೋಡಾ ಸರಕಾರದಿಂದ ಬೆಂಬಲ ಹಿಂತೆಗೆದುಕೊಂಡ ಬಳಿಕ 23 ತಿಂಗಳ ಸರಕಾರ ಅಲ್ಪಮತಕ್ಕೆ ಬಿದ್ದಿದೆ. ಕೋಡಾ ಅವರಿಗೆ ಇದೀಗ 25 ಶಾಸಕರ ಬೆಂಬಲವಿದೆ. ಜೆಎಂಎಂ ಪಕ್ಷ 17 ಶಾಸಕರನ್ನು ಹೊಂದಿದೆ.
ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ವಿಶ್ವಾಸ ಮತಯಾಚನೆ ವೇಳೆ ಬೆಂಬಲಿಸಿರುವುದಕ್ಕೆ ಪ್ರತಿಯಾಗಿ ಜೆಎಂಎಂ ವರಿಷ್ಠ ಶಿಬು ಸೊರೇನ್ ಜಾರ್ಖಂಡ್ ಮುಖ್ಯಮಂತ್ರಿ ಪದವಿಯನ್ನು ಯಾಚಿಸುತ್ತಿದ್ದಾರೆ.
|