ಮುಂಬೈ: ಕೆನ್ ಹೇವುಡ್ ಪ್ರಕರಣವು ಭಾರತದ ನ್ಯಾಯಾಂಗ ವಿಚಾರ ಎಂದು ಅಮೆರಿಕ ಹೇಳಿದೆ.
ಅಹಮದಾಬಾದ್ ಸರಣಿ ಸ್ಫೋಟಕ್ಕೆ ಮುಂಚಿತವಾಗಿ ಉಗ್ರರು ಅಮೆರಿಕ ಪ್ರಜೆ ಹೇವುಡ್ ಕಂಪ್ಯೂಟರಿನ ಅಂತರ್ಜಾಲ ಸಂಪರ್ಕ ಐಪಿ ವಿಳಾಸ ಬಳಸಿ, ಇಮೇಲ್ ಸಂದೇಶ ಕಳುಹಿಸಿದ್ದು, ಹೇವುಡ್‌ಗೆ ಶೋಧನಾ ನೋಟೀಸ್ ನೀಡಲಾಗಿದ್ದರೂ ಆತ ಭಾರತ ಬಿಟ್ಟು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ.
"ಇದು ಭಾರತದ ನ್ಯಾಯಾಂಗ ವಿಚಾರ. ಈ ಕುರಿತು ತನ್ನ ಬಳಿ ವಿವರಗಳಿಲ್ಲ, ಈ ಕುರಿತು ಪ್ರತಿಕ್ರಿಯಿಸಲಾರೆ" ಎಂದು ಈ ಕುರಿತು ಅಮೆರಿಕ ವಿದೇಶಾಂಗ ಇಲಾಖೆಯ ಸಹಾಯಕ ಕಾರ್ಯದರ್ಶಿ ರಿಚರ್ಡ್ ಬುಚರ್ ಹೇಳಿದ್ದಾರೆ.
ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ದಳವು ಹೇವುಡ್‌ಗೆ ಶೋಧನಾ ನೋಟೀಸು ನೀಡಿದ್ದರೂ ಆತ ಆಗಸ್ಟ್ 18ರಂದು ರಾಷ್ಟ್ರ ತೊರೆದಿದ್ದ. ಇಂಡಿಯನ್ ಮುಜಾಹಿದ್ದೀನ್ ಎಂಬ ಭಯೋತ್ಪಾದನಾ ಸಂಘಟನೆಯು ಕಳುಹಿಸಿದೆ ಎನ್ನಲಾಗಿರುವ ಬೆದರಿಕೆ ಇಮೇಲ್‍ನ ಮೂಲದ ಜಾಡು ಹಿಡಿದು ಪೊಲೀಸರು ತನಿಖೆ ನಡೆಸಿದ್ದು, ಅದು ನವಿ ಮುಂಬಯಿಯಲ್ಲಿರುವ ಹೇವುಡ್‌ನ ಇಂಟರ್ನೆಟ್ ಪ್ರೊಟೋಕಾಲ್ ವಿಳಾಸ ಎಂಬುದು ಪತ್ತೆಯಾಗಿತ್ತು.
ಹೇವುಡ್ ನಿವಾಸದಲ್ಲಿದ್ದ ಮೂರು ಕಂಪ್ಯೂಟರ್‌ಗಳನ್ನು ಮುಟ್ಟುಗೋಲು ಹಾಕಲಾಗಿತ್ತು ಅಲ್ಲದೆ, ಹೇವುಡ್‌ನನ್ನು ಬ್ರೈನ್ ಮ್ಯಾಪಿಂಗ್ ಹಾಗೂ ಸುಳ್ಳುಪತ್ತೆ ಮುಂತಾದ ವೈಜ್ಞಾನಿಕ ಪರೀಕ್ಷೆಗಳಿಗೆ ಒಡ್ಡಲಾಗಿತ್ತು. ಆದರೆ ಈ ಪರೀಕ್ಷೆಗಳಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಹೇವುಡ್‌ನ ಅಸುರಕ್ಷಿತ ಅಂತರ್ಜಾಲ ಸಂಪರ್ಕವನ್ನು ಉಗ್ರರು ಬಳಸಿ ಇಮೇಲ್ ಸಂದೇಶ ಕಳುಹಿಸಿರಬಹುದು ಎಂಬುದಾಗಿ ಎಟಿಎಸ್ ಅಧಿಕಾರಿಗಳು ಶಂಕಿಸಿದ್ದಾರೆ.
|