ಬಹಳಷ್ಟು ರಾಜಕೀಯ ಒತ್ತಡದ ಬಳಿಕ ಜಾರ್ಖಂಡ್ ಮುಖ್ಯಮಂತ್ರಿ ಮಧು ಕೋಡಾ ಅವರು ಶನಿವಾರ ಕೊನೆಗೂ ರಾಜೀನಾಮೆ ನೀಡುವ ಮೂಲಕ,ಜೆಎಂಎಂ ಶಿಬು ಸೊರೆನ್‌ಗೆ ಹಾದಿಯನ್ನು ಸುಗಮಗೊಳಿಸಿದ್ದಾರೆ.
ಮುಖ್ಯಮಂತ್ರಿ ಮಧು ಕೋಡಾ ಅವರು ಶನಿವಾರ ಸಂಜೆ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಸೈಯದ್ ಸಿಬ್ಟೆ ರಾಜಿ ಅವರಿಗೆ ಸಲ್ಲಿಸಿದ್ದಾರೆ.
ಆಡಳಿತರೂಢ ಮಧು ಕೋಡಾ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಜೆಎಂಎಂ ವಾಪಸ್ ಪಡೆದ ಬಳಿಕ,ಕೋಡಾ ಅವರು ವಿಶ್ವಾಸಮತ ಕೋರುವುದೋ,ಬಿಡುವುದೋ ಎಂಬ ಬಗ್ಗೆ ಶನಿವಾರ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದರು.
ಇಂದು ಸಂಜೆ ಪಕ್ಷೇತರ ಶಾಸಕರೊಂದಿಗೆ ತಮ್ಮ ನಿವಾಸದಲ್ಲಿ ಮಾತುಕತೆ ಚರ್ಚೆ ನಡೆಸಿದ ಬಳಿಕ,ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು.
ಕೋಡಾ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಸ್ಟೇಪನ್ ಮರಾಂಡಿ,ಆರೋಗ್ಯ ಸಚಿವ ಭಾನುಪ್ರತಾಪ್ ಸಾಹಿ, ಸಮಾಜ ಕಲ್ಯಾಣ ಸಚಿವ ಜೋಬಾ ಮಾಜ್‌ಹಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಚಂದ್ರಪ್ರಕಾಶ್ ಚೌಧುರಿ ಪಾಲ್ಗೊಂಡಿದ್ದರು.
ಶುಕ್ರವಾರ ಯುಪಿಎ ಅಧ್ಯಕ್ಷೆ ಸೋನಿಯ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ್ದ ಅವರು ಮುಖ್ಯಮಂತ್ರಿ ಗದ್ದುಗೆಯಿಂದ ಕೆಳಗಿಳಿಯುವ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಒಪ್ಪಿದ್ದರು.ಅದರಂತೆ ಇಂದು ತಮ್ಮ ನಿವಾಸದಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಿದ ಬಳಿಕ ತಮ್ಮ ನಿರ್ಧಾರವನ್ನು ಬಹಿರಂಗಗೊಳಿಸಿದ್ದರು.
ಅಣುಒಪ್ಪಂದದ ವಿಚಾರದಲ್ಲಿ ವಿಶ್ವಾಸಮತ ಕಳೆದುಕೊಂಡ ಯುಪಿಎ ಸರ್ಕಾರ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಜೆಎಂಎಂನ ವರಿಷ್ಠ ಶಿಬು ಸೊರೆನ್ ಅವರು ತಮಗೆ ಜಾರ್ಖಂಡ್ ಸಿಎಂ ಹುದ್ದೆ ನೀಡುವುದಾದರೆ ತಾವು ಬೆಂಬಲಿಸುವುದಾಗಿ ಷರತ್ತು ಒಡ್ಡಿದ್ದ ಹಿನ್ನೆಲೆಯಲ್ಲಿ ಈ ರಾಜಕೀಯ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿತ್ತು.
ಅದರಂತೆ ಶಿಬುಸೊರೆನ್ ಹಾಗೂ ಶಾಸಕರು ಯುಪಿಎಯನ್ನು ಬೆಂಬಲಿಸಿದ್ದರು,ಬಳಿಕ ಜಾರ್ಖಂಡ್ ಮುಖ್ಯಮಂತ್ರಿ ಮಧುಕೋಡಾ ಅವರಿಗೆ ಹುದ್ದೆಯಿಂದ ಕೆಳಗಿಳಿಯುವಂತೆ ಯುಪಿಎ ಸೂಚಿಸಿತ್ತು.ಆದರೆ ಕೋಡಾ ಅವರು ನಿರಾಕರಿಸಿದ್ದರಿಂದ ಬಿಕ್ಕಟ್ಟು ಉದ್ಭವಿಸಿತ್ತು. ಏತನ್ಮಧ್ಯೆ ಶಿಬು ಅವರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ತೆಗೆದುಕೊಳ್ಳುವ ಮೂಲಕ ಇಕ್ಕಟ್ಟಿಗೆ ಸಿಲುಕಿಸಿದ್ದರು.
ಕೊನೆಗೂ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರ ಮಧ್ಯಪ್ರವೇಶದಿಂದಾಗಿ ಕೋಡಾ ಅವರು ಸಿಎಂ ಹುದ್ದೆಯಿಂದ ಕೆಳಗಿಳಿಯುವ ಮೂಲಕ,ಶಿಬು ಸೊರೆನ್ ಅವರಿಗೆ ಅಧಿಕಾರ ಸ್ವೀಕಾರಕ್ಕೆ ಅನುವು ಮಾಡಿಕೊಟ್ಟಂತಾಗಿದೆ.
|