ಜಮ್ಮುಕಾಶ್ಮೀರದಾದ್ಯಂತ ಅನಿರ್ದಿಷ್ಟಾವಧಿ ನಿಷೇಧಾಜ್ಞೆಯನ್ನು ಹೇರಲಾಗಿದ್ದು, ಇದೇ ವೇಳೆ ಪ್ರತಿಭಟನಾನಿರತರಾಗಿರುವ ಪ್ರತ್ಯೇಕತಾವಾದಿ ನಾಯಕರ ಮೇಲೆ ಪೊಲೀಸರು ಶಿಸ್ತಿನ ಕ್ರಮ ಕೈಗೊಳ್ಳುತ್ತಿದ್ದಾರೆ.
ಕಾಶ್ಮೀರ ವಿಷಯವನ್ನು ಪರಿಹರಿಸುವ ನಿಟ್ಟಿನಲ್ಲಿನ ಕೇಂದ್ರ ಸರಕಾರದ ವಿಫಲತೆಯ ವಿರುದ್ಧ ಪ್ರತಿಭಟನೆ ನಡೆಸಲು ಪತ್ಯೇಕತಾವಾದಿಗಳು ನಾಳೆ ಲಾಲ್ ಚೌಕ್‌ನಲ್ಲಿ ರಾಲಿಗೆ ಕರೆ ನೀಡಿರುವ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಮುಂಜಾಗೃತಾ ಕ್ರಮವಾಗಿ ಶ್ರೀನಗರ ಮತ್ತು ಕಾಶ್ಮೀರ ಕಣಿವೆಯ ಇತರ ಪ್ರಮುಖ ನಗರಗಳಲ್ಲಿ ಕರ್ಫೂವನ್ನು ಹೇರಲಾಗಿದೆ ಎಂದು ಸರಕಾರಿ ವಕ್ತಾರರೊಬ್ಬರು ತಿಳಿಸಿದ್ದಾರೆ.
ನಾಳಿನ ಲಾಲ್ ಚೌಕ್ ರಾಲಿಯ ಸಂದರ್ಭ ಮೀರ್ವಾಯ್ಜ್ ಉಮರ್ ಫಾರುಕ್, ಸೈದ್ ಅಲಿ ಗಿಲಾನಿ ಮತ್ತು ಯಾಸಿನ್ ಮಲಿಕ್ ಒಳಗೊಂಡಂತೆ ಪ್ರತ್ಯೇಕತಾವಾದಿ ನಾಯಕರುಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಕೆಲ ಜನರು ಯೋಜಿಸುತ್ತಿರುವ ಬಗ್ಗೆ ರಾಜ್ಯ ಸರಕಾರ ಮಾಹಿತಿ ಪಡೆದಿದೆ.
ಪ್ರತ್ಯೇಕತಾವಾದಿ ನಾಯಕರನ್ನು ಗುರಿಯಾಗಿಸುವ ಬಗ್ಗೆ ಮಾಹಿತಿ ಇದ್ದು, ಮುಂಜಗೃತಾ ಕ್ರಮವಾಗಿ ನಿಷೇಧಾಜ್ಞೆಯನ್ನು ಹೇರಲಾಗಿದೆ ಮತ್ತು ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ಜನರನ್ನು ಕೋರಲಾಗಿದೆ ಎಂದು ವಕ್ತಾರರೊಬ್ಬರು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತು ಅರೆ ಮಿಲಿಟರಿ ಪಡೆ ಹುರಿಯತ್ ಸಂಘಟನೆಯ ವಕ್ತಾರ ಆಯಜ್ ಅಕ್ಬರ್ ಸೇರಿದಂತೆ ಸುಮಾರು 20 ಕ್ಕಿಂತಲೂ ಅಧಿಕ ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
|