ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಅವರ ಪಕ್ಷದ ಅಧಿಕೃತ ಘೋಷಣೆಗೆ ಕ್ಷಣಗಣನೆ ಆರಂಭವಾಗಿದ್ದು, ತಿರುಪತಿಯಲ್ಲಿ ಭರ್ಜರಿ ಸಿದ್ದತೆ ನಡೆಯುತ್ತಿದೆ.
ಸೂಪರ್ ಸ್ಟಾರ್ ಚಿರಂಜೀವಿ ಅವರ ರಾಜಕೀಯ ಪ್ರವೇಶಕ್ಕೆ ಈಗ ಎಲ್ಲಿಲ್ಲದ ಮಹತ್ವದ ಬಂದಿದ್ದು, ತಿರುಪತಿಯ ರಾಜೀವ್ ನಗರದ 200 ಎಕರೆ ಸ್ಥಳದಲ್ಲಿ ಸಮಾರಂಭಕ್ಕಾಗಿ ಬೃಹತ್ ವೇದಿಕೆಯನ್ನು ಸಿದ್ದ ಪಡಿಸಿದ್ದು, ನಾಳೆ (ಆ.26) ನಡೆಯಲಿರುವ ಸಮಾರಂಭದಲ್ಲಿ ಅಂದಾಜು 20 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ.
ಮೆಗಾಸ್ಟಾರ್ ಕಾರ್ಯಕ್ರಮದ ಅಂಗವಾಗಿ ತಿರುಪತಿಯ ರಸ್ತೆಯುದ್ದಕ್ಕೂ ಬ್ಯಾನರ್, ಕಟೌಟ್‌ಗಳು ರಾರಾಜಿಸುತ್ತಿದ್ದು, ಈಗಾಗಲೇ ಪಕ್ಷದ ಚಿಹ್ನೆ ಮತ್ತು ಧ್ವಜವನ್ನು ಬಿಡುಗಡೆ ಮಾಡಲಾಗಿದೆ.
ಚಿರಂಜೀವಿ ರಾಜಕೀಯ ಪ್ರವೇಶದಿಂದಾಗಿ ಆಂಧ್ರದ ರಾಜಕೀಯ ರಂಗದಲ್ಲಿ ಭದ್ರವಾಗಿ ತಳವೂರಿರುವ ಕಾಂಗ್ರೆಸ್ ಮತ್ತು ತೆಲುಗುದೇಶಂಗೆ ನಡುಕ ಹುಟ್ಟಿಸಿದೆ. ಆ ನಿಟ್ಟಿನಲ್ಲಿ ಆಂಧ್ರ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.
ನಾಳೆ ನಡೆಯಲಿರುವ ಸಮಾರಂಭ ಚಿರಂಜೀವಿ ಅವರ ಶಕ್ತಿ ಪ್ರದರ್ಶನವಾಗಲಿದೆ, ಅದಕ್ಕಾಗಿ ಮಹಿಳೆಯರು,ಪುರುಷರು, ಅಂಗವಿಕಲರಿಗಾಗಿ ವಿಶೇಷ ಆಸನದ ವ್ಯವಸ್ಥೆ ಮಾಡಲಾಗಿದೆ.
ಬಿಗಿ ಬಂದೋಬಸ್ತ್: ರಾಜೀವ್ ನಗರದಲ್ಲಿ ನಡೆಯಲಿರುವ ಅದ್ದೂರಿ ಸಮಾರಂಭದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ರಮುಖ ಧಾರ್ಮಿಕ ಕ್ಷೇತ್ರವಾ ಗಿರುವ ತಿರುಪತಿಯಲ್ಲಿ ಭಕ್ತರ ದಂಡು ಒಂದೆಡೆಯಾದರೆ, ನಾಳೆ ನಡೆಯಲಿರುವ ಕಾರ್ಯಕ್ರಮಕ್ಕೆ ಚಿರಂಜೀವಿಯವರ ಅಸಂಖ್ಯಾತ ಅಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಭಿನ್ನ ಪಕ್ಷ : ಆಂಧ್ರ ರಾಜಕೀಯದಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತಳವೂರಿದ್ದರೂ ಕೂಡ, ಅಲ್ಲಿಯೂ ಅಂದಿನ ಖ್ಯಾತ ನಟ ಎನ್‌ಟಿಆರ್ ಅವರ ಪ್ರವೇಶದಿಂದಾಗಿ ತೆಲುಗು ದೇಶಂ ಪ್ರಾದೇಶಿಕ ಪಕ್ಷ ತನ್ನ ಛಾಪನ್ನು ಮೂಡಿಸಿ ರಾಷ್ಟ್ರೀಯ ಪಕ್ಷಕ್ಕೆ ಸೆಡ್ಡು ಹೊಡೆದಿತ್ತು. ಹಾಗೇ ಪ್ರತ್ಯೇಕ ತೆಲಂಗಾಣ ಅಜೆಂಡಾದ ಮೂಲಕ ರಾಷ್ಟ್ರೀಯ ತೆಲಂಗಾಣ ಪಕ್ಷ ಕೂಡ ಜನ್ಮ ತಳೆದಿತ್ತು.
ಆದರೆ ಇದೀಗ ಕಳೆದ 35ವರ್ಷಗಳಿಂದ ಸಿನಿಮಾರಂಗದಲ್ಲಿದ್ದ ಚಿರಂಜೀವಿಯವರು ರಾಜಕೀಯ ಪ್ರವೇಶಿಸುತ್ತಿದ್ದಾರೆ,ತಮ್ಮದು ಬಡವರ,ಹಿಂದುಳಿದವರ ಪಕ್ಷವಾಗಲಿದ್ದು,ನೂತನ ಕಲ್ಪನೆಯೊಂದಿಗೆ ಪಕ್ಷವನ್ನು ರೂಪಿಸುವುದಾಗಿ ಚಿರಂಜೀವಿ ಘೋಷಿಸಿದ್ದರು,ಆ ನಿಟ್ಟಿನಲ್ಲಿ ಮೆಗಾಸ್ಟಾರ್ ಅವರ ಪಕ್ಷ ಹತ್ತರೊಟ್ಟಿಗೆ ಹನ್ನೊಂದಾಗುತ್ತೋ ಇಲ್ಲ ವಿಭಿನ್ನ ಪಕ್ಷವಾಗುತ್ತೋ ಎಂಬುದನ್ನು ಕಾದು ನೋಡಬೇಕಾಗಿದೆ....
|