ಕೇಂದ್ರ ಸರಕಾರದ ದೂರಿನನ್ವಯ ಭಾರತೀಯ ಇಸ್ಲಾಂ ವಿದ್ಯಾರ್ಥಿ ಚಳುವಳಿ(ಸಿಮಿ) ಸಂಘಟನೆಯ ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ಮತ್ತೆ ಆರು ವಾರಗಳಿಗೆ ಮುಂದುವರಿಸಿದೆ.
ಸರ್ವೋಚ್ಛ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 24ರಂದು ನಿಗದಿ ಪಡಿಸಿದೆ.
ನ್ಯಾಯಾಯಲಯಕ್ಕೆ ಸಲ್ಲಿಸಿರುವ ಹೊಸ ಅಫಿದಾವಿತ್‌ನಲ್ಲಿ ಕೇಂದ್ರ ಸರಕಾರವು, ಜುಲೈ 26ರಂದು ಅಹಮದಾಬಾದಿನಲ್ಲಿ ನಡೆಸಿರುವ ಸರಣಿ ಸ್ಫೋಟಗಳಲ್ಲಿ ಸಿಮಿಯ ಕೈವಾಡ ಮತ್ತು ಅಂತಾರಾಷ್ಟ್ರೀಯ ಭಯೋತ್ಪಾದನಾ ಸಂಘಟನೆಗಳೊಂದಿಗೆ ಅದರ ಸಂಪರ್ಕ ಕುರಿತು ಪುರಾವೆ ಒದಗಿಸಿದೆ.
ವಿಶೇಷ ನ್ಯಾಯಾಧಿಕರಣ ಒಂದು ಸಿಮಿ ಮೇಲಿನ ನಿಷೇಧ ತೆರವುಗೊಳಿಸಿರುವ ಆದೇಶಕ್ಕೆ, ಆಗಸ್ಟ್ ಆರರಂದು ಮುಖ್ಯನ್ಯಾಯಾಧೀಶ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರ ನೇತೃತ್ವದ ನ್ಯಾಯ ಪೀಠ ತಡೆಯಾಜ್ಞೆ ನೀಡಿತ್ತು. ಸರಕಾರ ಸಾಕಷ್ಟು ಪುರಾವೆಗಳನ್ನು ಒದಗಿಸಿಲ್ಲ ಎಂಬ ನೆಲೆಯಲ್ಲಿ ನ್ಯಾಯಾಧೀಕರಣ ಸಿಮಿ ಮೇಲಿನ ನಿಷೇಧ ತೆರವುಗೊಳಿಸಿತ್ತು.
ಕಾನೂನು ಬಾಹಿರ(ತಡೆ) ಕಾಯ್ದೆಯನ್ವಯ 2001ರಿಂದ ಸಿಮಿ ಸಂಘಟನೆಯ ಮೇಲೆ ನಿಷೇಧ ಹೇರಲಾಗಿದೆ.
ಸಿಮಿ ಸಂಘಟನೆಯ 1,900 ಕಾರ್ಯಕರ್ತರು 89 ಭಯೋತ್ಪಾದನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರದ ವಿವಿಧ ಜೈಲುಗಳಲ್ಲಿದ್ದಾರೆ ಎಂದು ಕೇಂದ್ರ ಸರಕಾರ ಹೇಳಿದೆ.
|