ಜಾರ್ಖಂಡಿನಲ್ಲಿ ಸರಕಾರ ರಚನೆಗೆ ಹಕ್ಕು ಮಂಡಿಸಲು ಮುಂದಾಗಿರುವ ಶಿಬು ಸೊರೇನ್ ಅವರಿಗೆ ಹಾಲಿ ಉಸ್ತುವಾರಿ ಮುಖ್ಯಮಂತ್ರಿ ಮಧುಕೋಡಾ ಬೆಂಬಲ ಘೋಷಿಸಿರುವ ಹಿನ್ನೆಲೆಯಲ್ಲಿ ಸರಕಾರ ರಚನೆಯ ಅಡೆತಡೆಗಳು ನಿವಾರಣೆಯಾಗಿವೆ.
ಆರ್‌ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ಅವರ ಸಂಧಾನದ ಫಲವಾಗಿ ಶಿಬು ಸೊರೇನ್‌ರಿಗೆ ಕೋಡಾ ಬೆಂಬಲ ಲಭಿಸಿದೆ.
ಜಾರ್ಖಂಡ್ ಮುಖ್ಯಮಂತ್ರಿ ಮಧುಕೋಡಾ ಅವರ ಆಪ್ತರಾಗಿದ್ದ, ಉಪಮುಖ್ಯಮಂತ್ರಿ ಸ್ಟೀಫನ್ ಮರಾಂಡಿ ಅವರನ್ನು ಶಿಬು ಸೋಮವಾರ ಬೆಳಿಗ್ಗೆ ಭೇಟಿ ಮಾಡಿದ್ದರು.
ಗುರೂಜಿ(ಶಿಬು) ಅವರು ತನ್ನ ನಿವಾಸಕ್ಕೆ ಬಂದಿದ್ದು, ಬೆಂಬಲ ಕೋರಿದ್ದಾಗಿ ಹೇಳಿರುವ ಮರಾಂಡಿ, ಮಧು ಕೋಡಾವ ಅವರ ಸಲಹೆ ಪಡೆದ ಬಳಿಕವೇ ತನ್ನ ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದಾರೆ. ತಾನು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರೊಂದಿಗೆ ಕೋಡಾ ಅವರನ್ನು ಭೇಟಿ ಮಾಡುವುದಾಗಿ ಮರಾಂಡಿ ಹೇಳಿದ್ದರು.
ಸ್ವತಂತ್ರ ಅಭ್ಯರ್ಥಿಗಳು ಶಿಬು ಅವರತ್ತ ವಾಲಿದ್ದ ಕಾರಣ, ಅಧಿಕಾರಕ್ಕಾಗಿಯ ಹಗ್ಗಜಗ್ಗಾಟದಲ್ಲಿ ಮುಖ್ಯಮಂತ್ರಿಯಾಗಿದ್ದ ಮಧು ಕೋಡಾ ಅವರು ಪ್ರಸ್ತುತ ಏಕಾಂಗಿಯಾಗಿ ಉಳಿದಿದ್ದರು,
ಪಕ್ಷೇತರರಾದ ಭಾನು ಪ್ರತಾಪ್ ಶಾಹಿ, ಇನೋಸ್ ಎಕ್ಕಾ, ಹರಿನಾರಾಯಣ್ ರಾಯ್ ಮತ್ತು ಸಂಯುಕ್ತ ಗೋವಾ ಪ್ರಜಾತಂತ್ರ ಪಕ್ಷ(ಯುಜಿಡಿಪಿ) ಪಕ್ಷದ ಟಿಕೆಟ್‌ನಲ್ಲಿ ಚುನಾವಣೆ ಸ್ಫರ್ಧಿಸಿರುವ ಜೋಬಾ ಮಂಜಿಹಿ ಮತ್ತು ಬಂಧು ತಿರ್ಕೆ ಅವರೂ ಶಿಬು ಅವರನ್ನು ಬೆಂಬಲಿಸಲು ಮುಂದಾಗಿದ್ದಾರೆ ಎಂದು ಮರಾಂಡಿ ತಿಳಿಸಿದ್ದರು.
|