ವಿಎಚ್‌ಪಿ ನಾಯಕ ಲಕ್ಷ್ಣಣಾನಂದ ಸರಸ್ವತಿ ಹಾಗೂ ಐವರು ಸಹಚರರನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಒರಿಸ್ಸಾದ ಕೋಮುಸೂಕ್ಷ್ಮ ಪ್ರದೇಶವಾದ ಬರ್‌ಗರ್‌ನಲ್ಲಿ ಸೋಮ ವಾರ ಕ್ರೈಸ್ತ ಪ್ರಾರ್ಥನಾ ಮಂದಿರವೊಂದಕ್ಕೆ ಬೆಂಕಿ ಹಚ್ಚಿದ ಪರಿಣಾಮ ಕ್ರೈಸ್ತ ಸನ್ಯಾಸಿನಿಯೋರ್ವರು ಜೀವಂತವಾಗಿ ದಹನವಾಗಿದ್ದಾರೆ.
ಸೋಮವಾರ ಸಂಜೆ 5ಗಂಟೆ ಸುಮಾರಿಗೆ ಒರಿಸ್ಸಾದ ಕುಂಟಪಾಲಿ ಗ್ರಾಮಕ್ಕೆ ಆಗಮಿಸಿದ್ದ ಶಂಕಿತ ಸಂಘಪರಿವಾರದ ಕಾರ್ಯಕರ್ತರು ಮೊದಲಿಗೆ ಪ್ರಾರ್ಥನಾ ಮಂದಿರಕ್ಕೆ ದಾಳಿ ಮಾಡಿ,ಅಲ್ಲಿದ್ದ ಮಕ್ಕಳನ್ನು ಹೊರ ಕರೆ ತಂದು ಬೆಂಕಿ ಹಚ್ಚಿದ್ದರು. ಆದರೆ ಈ ಸಂದರ್ಭದಲ್ಲಿ 25ರ ಹರೆಯದ ಕ್ರೈಸ್ತ ಸನ್ಯಾಸಿನಿ ಮತ್ತು ಪಾದ್ರಿ ಬೆಂಕಿಗೆ ಸಿಲುಕಿದ್ದರು.
ಈ ಆಗ್ನಿಕಾಂಡದಲ್ಲಿ ಕ್ರೈಸ್ತ ಸನ್ಯಾಸಿನಿ ಜೀವಂತವಾಗಿ ದಹನಗೊಂಡಿದ್ದು,ಪಾದ್ರಿಯವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಅವರು ಚೇತರಿಸಿಕೊಳ್ಳುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಈ ಮೊದಲು ಹಿಂದೂ ಮೂಲಭೂತವಾದಿಗಳು 1999ರಲ್ಲಿಯೂ ಆಸ್ಟ್ರೇಲಿಯಾದ ಕ್ರೈಸ್ತ್ ಮಿಷನರಿ ಗ್ರಾಹಂ ಸ್ಟೈನ್ಸ್ ಹಾಗೂ ಇಬ್ಬರು ಮಕ್ಕಳನ್ನು ಕಾರಿನೊಳಗೆಯೇ ಬೆಂಕಿ ಹಚ್ಚಿ ಹತ್ಯೆಗೈಯಲಾಗಿತ್ತು.
ವಿಎಚ್‌ಪಿ ನಾಯಕ ಲಕ್ಷ್ಣಣಾನಂದ ಸರಸ್ವತಿ ಹಾಗೂ ಐವರು ಸಹಚರರನ್ನು ಹತ್ಯೆ ಮಾಡಿದ್ದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಸೋಮವಾರದಂದು ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಿದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರೊಚ್ಚಿಗೆದ್ದ ಹಿಂದೂಪರ ಸಂಘಟನೆಯ ಕಾರ್ಯಕರ್ತರು 12ಕ್ಕೂ ಅಧಿಕ ಚರ್ಚ್‌ಗಳಿಗೆ ಬೆಂಕಿ ಹಚ್ಚಿದ್ದು, ಪೊಲೀಸ್ ಔಟ್ ಪೋಸ್ಟ್‌ಗಳು ಅಗ್ನಿಗಾಹುತಿಯಾಗಿವೆ. ಅಲ್ಲದೇ ಕೋಮು ಸೂಕ್ಷ್ಮ ಪ್ರದೇಶವಾದ ಕಂದಮಾಲ್ ಪ್ರದೇಶದಲ್ಲಿ 15ವಾಹನಗಳನ್ನು ಜಖಂಗೊಳಿಸಲಾಗಿದೆ.
ಜಿಲ್ಲೆಯ ಫೂಲ್‌ಬಾನಿಯಲ್ಲಿ ಎರಡು ಚರ್ಚ್‌ಗಳನ್ನು ಹಾನಿಗೊಳಿಸಲಾಗಿದೆ, ನೌಗಾಂವ್‌ನಲ್ಲಿ ಎರಡು ಪೊಲೀಸ್ ಔಟ್ ಪೋಸ್ಟ್‌ಗಳನ್ನು ಧ್ವಂಸಗೊಳಿಸಲಾಗಿದೆ. ಬಾಲಿಗುಂಡಾ, ಬಾರ್ಕಾಮಾ, ತಿಕಾಬಾಲಿ ಮತ್ತು ಉದಯ್‌ಗಿರಿಗಳಲ್ಲಿ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಸಲಾಗಿದೆ.
|