ಪ್ರತ್ಯೇಕತಾವಾದಿಗಳ ಕೂಗಿನಿಂದ ಹೊತ್ತಿ ಉರಿಯುತ್ತಿರುವ ಕಾಶ್ಮೀರದಲ್ಲಿನ ಉದ್ವಿಗ್ನತೆ ಮಂಗಳವಾರ ಮುಂಜಾನೆಯೂ ಮುಂದುವರಿದಿದ್ದು, ಸತತ ಮೂರನೇ ದಿನವೂ ಕರ್ಫ್ಯೂ ಮುಂದುವರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಹಿಂಸಾಚಾರ ತಾರಕಕ್ಕೇರಿದ್ದು ಸತ್ತವರ ಸಂಖ್ಯೆ ಏಳಕ್ಕೇರಿದೆ. ಭಾನುವಾರ ಮುಂಜಾನೆಯೇ ಕಾಶ್ಮೀರದ ಎಲ್ಲಾ ಹತ್ತು ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಆದರೆ ಇದನ್ನು ಧಿಕ್ಕರಿಸಿದ ಪ್ರತಿಭಟನಾಕಾರರು ಬೀದಿಗಿಳಿದಿದ್ದು, ಭದ್ರತಾಪಡೆಗಳೊಂದಿಗೆ ಘರ್ಷಣೆಗಿಳಿದು ಕಲ್ಲು ತೂರಾಟ ನಡೆಸಿದ್ದಾರೆ. ಗುಂಪು ಚದುರಿಸಲು ಭದ್ರತಾ ಸಿಬ್ಬಂದಿಗಳು ಗುಂಡು ಹಾರಿಸಿದ್ದು, ಏಳು ಮಂದಿ ಸಾವನ್ನಪ್ಪಿದರೆ, ಇತರ 70 ಮಂದಿಗಾಯಗೊಂಡಿದ್ದಾರೆ.
ಮೂವರು ಹಿರಿಯ ಪ್ರತ್ಯೇಕತಾ ನಾಯಕರಾದ, ಸಯೀದ್ ಅಲಿ ಗಿಲಾನಿ, ಮಿರ್ವಾಯಿಜ್ ಉಮರ್ ಫಾರೂಕ್ ಮತ್ತು ಮೊಹಮ್ಮದ್ ಯಾಸಿನ್ ಮಲಿಕ್ ಅವರುಗಳು ಜಾಥಾದಲ್ಲಿ ಭಾಗವಹಿಸದಂತೆ ತಡೆಯುವ ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿಸಲಾಗಿದೆ. ಜಾಥಾದ ವೇಳೆ ಈ ನಾಯಕರು ಸ್ಥಾಪಿತ ಹಿತಾಸಕ್ತಿಗಳ ಗುರಿಯಾಗಬಹುದೆಂಬ ಭೀತಿಯಿಂದ ಅವರನ್ನು ಬಂಧಿಸಲಾಗಿದೆ ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಪೊಲೀಸರು ಹಲವು ಜಾಗಗಳಿಗೆ ದಾಳಿ ನಡೆಸಿದ್ದು ಹಲವಾರು ದ್ವಿತೀಯ ಸ್ತರದ ನಾಯಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸೇನೆಯು ಪೊಲೀಸರಿಗೆ ಸಹಕರಿಸುತ್ತಿದೆ.
ಕಳೆದ ಶುಕ್ರವಾರ ಈದ್ಗಾ ಮೈದಾನಕ್ಕೆ ತೆರಳಿದ್ದ ಜಾಥಾದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದು, ಉದ್ದೇಶಿತ ಕೆಂಪು ಚೌಕದ ಜಾಥಾದಲ್ಲಿಯೂ ಅಷ್ಟೆ ಸಂಖ್ಯೆಯ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ಪಾಲ್ಗೊಳ್ಳಬಹುದೆಂದು ಊಹಿಸಲಾಗಿದ್ದು ಗಲಭೆ ತಡೆಯಲು ಭದ್ರತಾ ಸಿಬ್ಬಂದಿಗಳು ಹರಸಾಹಸ ಮಾಡುತ್ತಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕರ್ಫ್ಯೂ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಜನತೆಯ ಪ್ರಾಣ ಮತ್ತು ಆಸ್ತಿಪಾಸ್ತಿಗಳ ರಕ್ಷಣೆಗೆ ಕರ್ಫ್ಯೂ ಯಾವಾಗ ಅವಶ್ಯಕತೆ ಇಲ್ಲ ಎಂದು ಮನವರಿಕೆಯಾಗುತ್ತದೆಯೇ ಆವಾಗ ಕರ್ಫ್ಯೂ ಹಿಂತೆಗೆಯಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
|