ಪಾಟ್ನಾ: ಬಿಹಾರದ ಕೋಸಿ ನದಿಯು ಉಕ್ಕಿ ಹರಿಯುತ್ತಿದ್ದು, ಸುಮಾರು 200 ವರ್ಷಗಳಿಂದ ವರ್ಜ್ಯವಾಗಿದ್ದ ಕಾಲುವೆಯಲ್ಲಿ ತುಂಬಿ ಹರಿಯುತ್ತಿರುವ ಕಾರಣ, ಹಲವಾರು ಹಳ್ಳಿ, ಪಟ್ಟಣಗಳು ಮುಳುಗಿದ್ದು, ಸುಮಾರು 45ಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡಿದೆಯಲ್ಲದೆ, ಲಕ್ಷಾಂತರ ಮಂದಿಯನ್ನು ನಿರಾಶ್ರಿತರನ್ನಾಗಿಸಿದೆ.
ಇತರ ವಾರ್ಷಿಕ ಪ್ರವಾಹದಂತೆ ಇದೂ ಮಹಾ ವಿಪತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ನೇಪಾಳ ಗಡಿ ಸಮೀಪ ಭೀಮ್‌ನಗರ್ ಎಂಬಲ್ಲಿನ ಒಡಕಿನ ಕಾರಣ ನೀರು ರಭಸದಿಂದ ಹರಿಯುತ್ತಿದೆ. ಇತರ ಮಾಮೂಲಿ ಪ್ರವಾಹಗಳಂತಲ್ಲದೆ, ಪ್ರವಾಹದ ಸೆಳವು ಅಧಿಕವಾಗಿದ್ದು, ಪರಿಹಾರ ಕಾರ್ಯ ಅತ್ಯಂತ ಕಷ್ಟಕರವಾಗಿದೆ.
ಕೋಸಿ ನದಿಯ ರೌದ್ರಾವತಾರದಿಂದಾಗಿ, ಸುಮಾರು ಎರಡು ದಶಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಪ್ರವಾಹ ಪೀಡಿದ ಜಿಲ್ಲೆಗಳಲ್ಲೊಂದಾಗಿರುವ ಸಹರ್ಸಾದ ಸಂಸದೆ ರಂಜಿತಾ ರಂಜನ್ ಅವರು, ಊರುಕೇರಿಗಳು ಮುಳುಗಿರುವ ಕಾರಣ ಮಿಲಿಯಗಟ್ಟೆಲೆ ಮಂದಿ ನಿರಾಶ್ರಿತರಾಗಿದ್ದಾರೆ ಮತ್ತು ನೂರಾರು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ನೀರಿನಲ್ಲಿ ಶವಗಳು ತೇಲುತ್ತಿರುವುದನ್ನು ತಾನು ಕಣ್ಣಾರೆ ಕಂಡಿರುವುದಾಗಿಯೂ ಅವರು ಹೇಳಿದ್ದಾರೆ.
ಮೂರು ಕಿಲೋ ಮೀಟರ್ ಒಡಕು ದಿನೇದಿನೇ 200 ಮೀಟರ್‌ಗಳಷ್ಟು ಅಗಲವಾಗುತ್ತಿದ್ದು, ಭೀತಿ ಹುಟ್ಟಿಸಿದೆ. ಒಂದೊಮ್ಮೆ ಈ ಒಡಕು 12 ಕಿಲೋಮೀಟರ್ ದೂರ ಇರುವ ಅಣೆಕಟ್ಟನ್ನು ತಲುಪಿದರೆ, ಸುಪವುಲ್, ಸಹಸ್ರ, ಅರರಿಯ, ಮಾಧೇಪುರ, ಕತಿಹಾರ್ ಮತ್ತು ಪುರ್ನಿಯಾ ಜಿಲ್ಲೆಗಳು ಮುಳುಗಡೆಯಾಗಲಿದ್ದು, ಇನ್ನಷ್ಟು ವಿಪತ್ತು ಸಂಭವಿಸುವ ಸಾಧ್ಯತೆ ಇದೆ.
|