ಕೋಮು ಸೂಕ್ಷ್ಮ ಕಂಧಮಾಲ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಉದ್ವಿಗ್ನ ಸ್ಥಿತಿ ಮುಂದುವರಿದಿದ್ದು, ಮಂಗಳವಾರ ಮತ್ತೆ ಮೂರು ಮಂದಿ ಹತರಾಗಿದ್ದು, ಸತ್ತವರ ಸಂಖ್ಯೆ ಐದಕ್ಕೇರಿದೆ.
ವಿಶ್ವಹಿಂದೂ ಪರಿಷತ್ ನಾಯಕ ಲಕ್ಷ್ಮಣ ಸರಸ್ವತಿ ಹಾಗೂ ಇತರ ನಾಲ್ವರನ್ನು ಶನಿವಾರ ಕೊಲೆಗೈದಿರುವ ಬಳಿಕ, ಈ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಸೋಮವಾರ ಕ್ರೈಸ್ತ ಸನ್ಯಾಸಿನಿಯೊಬ್ಬರು ಸೇರಿದಂತೆ ಇಬ್ಬರು ಹತರಾಗಿದ್ದು, ಕ್ರೈಸ್ತ ಪಾದ್ರಿ ಗಂಭೀರ ಗಾಯಗೊಂಡಿದ್ದರು. ರಾಯ್ಕಿಯಾ ಕ್ಷೇತ್ರದಲ್ಲಿ ಮನೆಗಳಿಗೆ ಬೆಂಕಿಹಚ್ಚಲಾಗಿದ್ದು, ಮನೆಯೊಳಗೆ ಮಲಗಿದ್ದ ಮೂವರು ಉಸಿರು ಕಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೂವರು ವ್ಯಕ್ತಿಗಳು ಸತ್ತಿರುವ ಮಾಹಿತಿ ಇದೆ. ಈ ಕುರಿತು ವಿವರ ಸಂಗ್ರಹಿಸಲಾಗುತ್ತಿದೆ ಎಂದು ವಿಭಾಗೀಯ ಕಂದಾಯ ಆಯುಕ್ತ ಸತ್ಯವ್ರತ ಸಾಹು ಹೇಳಿದ್ದಾರೆ.
ಕಂಧಮಾಲ್ ಜಿಲ್ಲೆಯಲ್ಲಿ ಪರಿಸ್ಥಿತಿ ಉದ್ವಗ್ನವಾಗಿದ್ದರೂ ನಿಯಂತ್ರಣದಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಬಲಿಗುಡ, ತುಮುಡಿಬಂದ್ ಮತ್ತು ಫುಲ್ಬಾನಿ ಪಟ್ಟಣಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಸೋಮವಾರದ ದುರ್ಘಟನೆಯ ಬಳಿಕ ಪೊಲೀಸರು ಮತ್ತು ಅರೆ ಸೇನಾಪಡೆಗಳು ಪಥಸಂಚಲನೆ ನಡೆಸಿದ್ದಾರೆ.
ಕಳೆದ ವರ್ಷ ಕ್ರಿಸ್‌ಮಸ್ ವೇಳೆ ಸಂಭವಿಸಿದ್ದ ಕೋಮುಗಲಭೆಯಲ್ಲಿ ಕಂಧಮಾಲ್ ಜಿಲ್ಲೆಯು ಸಾಕಷ್ಟು ಹಾನಿಗೀಡಾಗಿತ್ತು. ಕೋಮುಸೂಕ್ಷ್ಮ ಪ್ರದೇಶವಾಗಿರುವ ಕಂಧಮಾಲ್‌ನಲ್ಲಿ ವಿಶ್ವಹಿಂದೂ ಪರಿಷತ್ ನಾಯಕನ ಹತ್ಯೆ ಹಿನ್ನೆಲೆಯಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ.
|