ಗಡಿನಿಯಂತ್ರಣ ರೇಖೆಯಲ್ಲಿ ಗುಂಡು ಹಾರಾಟ ಮತ್ತು ಉಗ್ರಗಾಮಿಗಳ ಅಕ್ರಮ ನುಸುಳುವಿಕೆ ಪ್ರಯತ್ನ ಕಳವಳಕಾರಿಯಾಗಿದೆ ಎಂದು ರಕ್ಷಣಾ ಸಚಿವ ಎ.ಕೆ.ಆಂಟನಿ ಹೇಳಿದ್ದಾರೆ.
ಜಮ್ಮು ಕಾಶ್ಮೀರದ ಕನಚಕ್ ಗಡಿಯಲ್ಲಿ, ಪಾಕಿಸ್ತಾನ ಪ್ರಾಂತ್ಯದಿಂದ ಉಗ್ರಗಾಮಿಗಳು ಗುಂಪೊಂದು ಭಾರತದ ಪ್ರಾಂತ್ಯದೊಳಕ್ಕೆ ನುಸುಳಿರುವ ಕೆಲವೇ ಗಂಟೆಗಳ ಬಳಿಕ ರಕ್ಷಣಾ ಸಚಿವರ ಹೇಳಿಕೆ ಹೊರಬಿದ್ದಿದೆ.
ಗಡಿನಿಯಂತ್ರಣ ರೇಖೆಯಲ್ಲಿ ಮತ್ತೊಮ್ಮೆ ಕದನವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ ಸೈನಿಕರು ಪೂಂಚ್ ಜಿಲ್ಲೆಯಲ್ಲಿ ಗುಂಡು ಹಾರಾಟ ನಡೆಸಿದ್ದು, ನಾಲ್ವರು ಗಡಿ ಭದ್ರತಾ ಪಡೆಯ ಸೈನಿಕರು ಗಾಯಗೊಂಡಿದ್ದಾರೆ.
ಕಳೆದ ಕೆಲವು ತಿಂಗಳಲ್ಲಿ ಅಕ್ರಮ ನುಸುಳುವಿಕೆ ಹೆಚ್ಚಿದೆ ಎಂಬುದನ್ನು ಒಪ್ಪಿಕೊಂಡಿರುವ ಸಚಿವರು, ಭಾರತೀಯ ಪಡೆಗಳು ಉತ್ತಮ ಕಾರ್ಯಕ್ಷಮತೆ ತೋರುತ್ತಿದ್ದು, ಹೆಚ್ಚೂ ಕಮ್ಮಿ, ಪರಿಸ್ಥಿತಿಯನ್ನು ನಿಯಂತ್ರಣದಲ್ಲಿರಿಸಿದ್ದಾರೆ ಎಂದು ಹೇಳಿದ್ದಾರೆ.
ಚಿಂತಿಸಲು ಕಾರಣವಿಲ್ಲ. ನಮ್ಮ ಪಡೆಗಳು ಗಡಿಯಲ್ಲಿನ ಯಾವುದೇ ಸವಾಲನ್ನು ಸ್ವೀಕರಿಸಲು ಸಿದ್ಧವಾಗಿದ್ದಾರೆ ಎಂದು ಗಾಢವಿಶ್ವಾಸ ಹೊಂದಿರುವ ಆದರೆ, ಚಿಂತಿತ ಆಂಟನಿ ವರದಿಗಾರರಿಗೆ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಅಕ್ರಮ ನುಸುಳುವಿಕೆಯನ್ನು ಉತ್ತೇಜಿಸದಂತೆ ಪಾಕಿಸ್ತಾನವನ್ನು ಭಾರತ ವಿನಂತಿಸಿಕೊಳ್ಳುತ್ತಿದೆ ಎಂದು ನುಡಿದರು. ಇತ್ತೀಚಿನ ಗಡಿಯಾಚೆಗಿನ ಗುಂಡು ಹಾರಾಟದಿಂದಾಗಿ ಹಲವು ಸಶಸ್ತ್ರ ಸಿಬ್ಬಂದಿಗಳು ಜೀವಕಳಕೊಂಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಯಾವುದೇ ಸಂದರ್ಭವನ್ನು ಎದುರಿಸಲು ಭಾರತದ ಸೇನೆಯು ಸಿದ್ಧವಾಗಿದೆ ಎಂದು ಆಂಟನಿ ನುಡಿದರು.
ಐದು ವರ್ಷಗಳ ಹಿಂದಿನ ಕದನ ವಿರಾಮ ಒಪ್ಪಂದವನ್ನು ಈ ವರ್ಷದಿಂದೀಚೆಗೆ, ಪಾಕಿಸ್ತಾನಿ ಪಡೆಗಳು 31 ಬಾರಿ ಉಲ್ಲಂಘಿಸಿವೆ. ಇದು ಭಾರತದ ಪಡೆಗಳನ್ನು ಗುಂಡಿನ ಕದನಕ್ಕೆ ಉದ್ರೇಕಿಸಿದ್ದರೂ, ಹೆಚ್ಚಿನ ಘಟನೆಗಳಲ್ಲಿ ಭಾರತ ಪಡೆಗಳು ಪ್ರತಿದಾಳಿ ನಡೆಸಿಲ್ಲ.
ರಜೌರಿ, ಸಾಂಬಾ, ಉರಿ, ತಂಗಧಾರ್ ಮತ್ತು ಪೂಂಚ್ ವಲಯಗಳಲ್ಲಿ ಪಾಕಿಸ್ತಾನವು ಕದನವಿರಾಮ ಒಪ್ಪಂದ ಉಲ್ಲಂಘಿಸಿದ್ದು, ದೊಡ್ಡ ಸಂಖ್ಯೆಯ ಉಗ್ರಗಾಮಿಗಳು ಇಲ್ಲಿನ ಗಡಿ ಪ್ರದೇಶದಲ್ಲಿ ಭಾರತಕ್ಕೆ ಅಕ್ರಮವಾಗಿ ನುಸುಳುತ್ತಿದ್ದಾರೆ.
|