ದೆಹಲಿಯಲ್ಲೂ ದಿಪಾವಳಿ ವೇಳೆ ಸ್ಫೋಟಗಳನ್ನು ನಡೆಸುವ ಜವಾಬ್ದಾರಿಯನ್ನು ತನಗೆ ನೀಡಲಾಗಿತ್ತು ಎಂದು ಜೈಪುರ ಸ್ಫೋಟಗಳ ಶಂಕಿತ ರೂವಾರಿ, ಬಂಧಿತ ಶಾಬಾಜ್ ಹುಸೈನ್ ಹೇಳಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜೈಪುರ ಮತ್ತು ದೆಹಲಿಗಳಲ್ಲಿ ಸ್ಫೋಟ ನಡೆಸುವಂತೆ ತನಗೆ ಜವಾಬ್ದಾರಿ ಒಪ್ಪಿಸಿರುವುದು ಸಿಮಿ ಮುಖಂಡ ಸಫ್ದರ್ ನಾಗೋರಿ ಎಂಬ ಅಂಶವನ್ನು ಆತ ತನಿಖೆಯ ವೇಳೆಗೆ ತಿಳಿಸಿದ್ದಾನೆ.
ಪಿಂಕ್ ಸಿಟಿ ಖ್ಯಾತಿಯ ಜೈಪುರದಲ್ಲಿ ನಡೆಸಲಾಗಿರುವ ಸ್ಫೋಟಕ್ಕೆ ಅಂತಿಮ ರೂಪವನ್ನು ಏಪ್ರಿಲ್ ತಿಂಗಳಲ್ಲಿ ನೀಡಲಾಗಿದ್ದು, ಇದಕ್ಕೆ ಮುಂಚಿತವಾಗಿ ಗುರಿ ಪ್ರದೇಶಗಳ ಪರೀಕ್ಷೆ ನಡೆಸಿರುವುದಾಗಿ ಹೇಳಿರುವ ಆತ, ಅಹಮದಾಬಾದ್ ಸ್ಫೋಟದ ರೂವಾರಿ ಅಬು ಬಶೀರ್ ಈ ಯೋಜನೆಯನ್ನು ಅಂಗೀಕರಿಸಿದ್ದ ಎಂಬ ವಿಚಾರವನ್ನು ತಿಳಿಸಿದ್ದಾನೆ.
ದೆಹಲಿ ಮಾತ್ರವಲ್ಲದೆ, ಉಜ್ಜೈನಿಯ ಪ್ರಸಿದ್ಧ ಮಹಾಕಾಳೇಶ್ವರ ದೇವಾಲಯವನ್ನು ಸ್ಫೋಟಿಸಲೂ ಆತನಿಗೆ ಸೂಚನೆ ನೀಡಲಾಗಿತ್ತು ಮಾತ್ರವಲ್ಲದೆ ಆತ ರಾಜಧಾನಿಯಲ್ಲಿ ಉಗ್ರಗಾಮಿ ನೆಟ್ವರ್ಕ್ ಸ್ಥಾಪಿಸಲೂ ಯೋಜಿಸುತ್ತಿದ್ದುದಾಗಿ ತನಿಖೆಯ ವೇಳೆಗೆ ಬಹಿರಂಗಪಡಿಸಿದ್ದಾನೆ.
ಉತ್ತರ ಪ್ರದೇಶ ಭಯೋತ್ಪಾದವಾ ವಿರೋಧಿ ದಳ ಮತ್ತು ರಾಜಸ್ಥಾನದ ಪೊಲೀಸರು ನಡೆಸಿರುವ ಜಂಟಿ ಕಾರ್ಯಾಚರಣೆ ವೇಳೆಗೆ, ಲಕ್ನೋದ ಅಮಿನಾಬಾದ್‌ನ ಶ್ರೀಮಂತ ಬಡಾವಣೆಯಿಂದ ಈತನನ್ನು ಸೋಮವಾರ ಬಂಧಿಸಲಾಗಿದೆ.
ಕಳೆದ ಮೇ ತಿಂಗಳಲ್ಲಿ ಜೈಪುರದಲ್ಲಿ ನಡೆಸಲಾಗಿದ್ದ ಈ ವಿಧ್ವಂಸಕ ಕೃತ್ಯದಲ್ಲಿ 68 ಮಂದಿ ಹತರಾಗಿದ್ದು, ಇತರ 150 ಮಂದಿ ಗಾಯಗೊಂಡಿದ್ದರು.
|